ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಪಾರದರ್ಶಕ ವ್ಯವಸ್ಥೆ: ಸಚಿವ ಲಮಾಣಿ

KannadaprabhaNewsNetwork |  
Published : Oct 14, 2026, 02:00 AM IST
ರುದ್ರಪ್ಪ ಲಮಾಣಿ | Kannada Prabha

ಸಾರಾಂಶ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಿಸುವುದರ ಜತೆಗೆ ಕಬ್ಬಿನ ತೂಕ, ಸಕ್ಕರೆ ರಿಕವರಿ, ಕಟಾವು ಅವಧಿ ಹಾಗೂ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

ಹಾವೇರಿ: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಿಸುವುದರ ಜತೆಗೆ ಕಬ್ಬಿನ ತೂಕ, ಸಕ್ಕರೆ ರಿಕವರಿ, ಕಟಾವು ಅವಧಿ ಹಾಗೂ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕರ್ನಾಟಕದ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಕಟಾವಿನ ಸೂಕ್ತ ಅವಧಿ ಹಾಗೂ ಸಕ್ಕರೆ ರಿಕವರಿ ಪ್ರಮಾಣದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರ ರಚಿಸಲಿರುವ ಜಂಟಿ ಉನ್ನತ ಮಟ್ಟದ ಸಮಿತಿಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಿವೆ. ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ, ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ), ಸಕ್ಕರೆ ಬೆಲೆ, ರಿಕವರಿ ಪ್ರಮಾಣ, ತೂಕದಲ್ಲಿನ ವ್ಯತ್ಯಾಸ, ಕಟಾವು ಅವಧಿ, ವೇಸ್ಟೇಜ್ ಕಡಿತ ಹಾಗೂ ರೈತರಿಗೆ ಪಾವತಿಯಾಗಬೇಕಾದ ಹಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಕಟಾವು ಅವಧಿ, ರಿಕವರಿ ಬಗ್ಗೆ ವೈಜ್ಞಾನಿಕ ಅಧ್ಯಯನ: ಕಬ್ಬನ್ನು ಯಾವ ಹಂತದಲ್ಲಿ ಕಟಾವು ಮಾಡಿದರೆ ರೈತರಿಗೆ ಗರಿಷ್ಠ ತೂಕ ಹಾಗೂ ಉತ್ತಮ ಸಕ್ಕರೆ ರಿಕವರಿ ದೊರೆಯುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸುವ ಅಗತ್ಯವಿದೆ. ರೈತರ ಆದಾಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಕಟಾವು ನಡೆಯಬಾರದು. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಕಬ್ಬು ಬೆಳೆಯುವ ಪ್ರದೇಶಗಳ ಪರಿಸ್ಥಿತಿ, ಜಿಲ್ಲಾವಾರು ರಿಕವರಿ ಪ್ರಮಾಣ ಹಾಗೂ ಕಟಾವಿನ ಸೂಕ್ತ ಅವಧಿಯನ್ನು ಅಧ್ಯಯನ ಮಾಡಿ ರಾಜ್ಯದ ಅಭಿಪ್ರಾಯವನ್ನು ಕೇಂದ್ರದ ಜಂಟಿ ಸಮಿತಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ತೂಕದ ವ್ಯತ್ಯಾಸಕ್ಕೆ ಕಡಿವಾಣ: ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬ ರೈತರ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರೈತರು ಬೆಳೆದ ಕಬ್ಬಿನ ನಿಖರ ತೂಕದ ಬಗ್ಗೆ ವಿಶ್ವಾಸ ಮೂಡಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಪ್ರದೇಶಗಳಲ್ಲಿ ಸರ್ಕಾರದ ಮೇಲ್ವಿಚಾರಣೆಯಡಿ ಸ್ವತಂತ್ರ ತೂಕದ ವ್ಯವಸ್ಥೆ ಜಾರಿಗೆ ತರುವ ಸಾಧ್ಯತೆ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕಬ್ಬಿನ ತೂಕದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸವೂ ರೈತರ ಆದಾಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ತೂಕದ ಪ್ರಕ್ರಿಯೆಯಲ್ಲಿ ಅನುಮಾನಗಳಿಗೆ ಅವಕಾಶವಿಲ್ಲದಂತೆ ಪಾರದರ್ಶಕ ವ್ಯವಸ್ಥೆ ರೂಪಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದರ ಜತೆಗೆ ಕಬ್ಬು ಕಟಾವಿನ ನಂತರ ವಿಧಿಸಲಾಗುತ್ತಿದೆ ಎನ್ನಲಾದ ವೇಸ್ಟೇಜ್ ಕಡಿತ, ರಿಕವರಿ ಪ್ರಮಾಣದ ಲೆಕ್ಕಾಚಾರ ಹಾಗೂ ಇತರ ಕಡಿತಗಳಲ್ಲಿಯೂ ವೈಜ್ಞಾನಿಕ ಮಾನದಂಡಗಳನ್ನು ಅಳವಡಿಸುವ ಅಗತ್ಯವಿದೆ. ಈ ಎಲ್ಲ ಅಂಶಗಳನ್ನು ಕೇಂದ್ರದ ಜಂಟಿ ಸಮಿತಿಯ ಮುಂದೆ ಸಮಗ್ರವಾಗಿ ಮಂಡಿಸಲಾಗುವುದು ಎಂದಿದ್ದಾರೆ.

ಬೆಲೆ ನಿಗದಿ ಮಾದರಿಗಳ ಪರಿಶೀಲನೆ: ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್‌ಆರ್‌ಪಿ ಜತೆಗೆ ಕರ್ನಾಟಕದಲ್ಲಿ ಕಾನೂನಿನಡಿ ಹೆಚ್ಚುವರಿ ಕಬ್ಬಿನ ದರ ನಿಗದಿಪಡಿಸುವ ವ್ಯವಸ್ಥೆಯೂ ಇದೆ. ರೈತರಿಗೆ ಇನ್ನಷ್ಟು ಲಾಭದಾಯಕ ಹಾಗೂ ಖಚಿತ ಬೆಲೆ ದೊರೆಯುವಂತೆ ಮಾಡಲು ಎಸ್‌ಎಪಿ ಸೇರಿದಂತೆ ಇತರ ರಾಜ್ಯಗಳಲ್ಲಿ ಅನುಸರಿಸಲಾಗುತ್ತಿರುವ ಬೆಲೆ ನಿಗದಿ ಮಾದರಿಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ದೆಹಲಿ ಸಭೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರತಿನಿಧಿಗಳು, ಕೇಂದ್ರ ಸರ್ಕಾರದ ಅಧಿಕಾರಿಗಳು, ರೈತ ಸಂಘಟನೆಗಳು, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಕೃಷಿ ವಿಜ್ಞಾನಿಗಳನ್ನು ಒಳಗೊಂಡ ಜಂಟಿ ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿಯ ಮುಂದೆ ಕರ್ನಾಟಕವು ಕಬ್ಬಿನ ಕಟಾವಿನ ಸೂಕ್ತ ಅವಧಿ, ಜಿಲ್ಲಾವಾರು ರಿಕವರಿ, ತೂಕದ ನಿಖರತೆ, ಪ್ರಯೋಗಾಲಯ ಪರೀಕ್ಷೆ, ವೇಸ್ಟೇಜ್ ಕಡಿತ, ರೈತರ ಪಾವತಿ, ಬೆಲೆ ನಿಗದಿ ಹಾಗೂ ಆದಾಯ ಹಂಚಿಕೆ ಸೇರಿದಂತೆ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರೈತರು ಮತ್ತು ಸಕ್ಕರೆ ಉದ್ಯಮ ಎರಡೂ ಉಳಿಯಬೇಕು. ಆದರೆ ಯಾವುದೇ ವ್ಯವಸ್ಥೆಯಲ್ಲೂ ರೈತರಿಗೆ ಅನ್ಯಾಯವಾಗಬಾರದು. ರೈತರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ನೀಡುವುದಷ್ಟೇ ಅಲ್ಲದೆ, ಶಾಶ್ವತ ಹಾಗೂ ಪಾರದರ್ಶಕ ವ್ಯವಸ್ಥೆ ರೂಪಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಯಾಚನೆ ವೇಳೆ ಸಂಕನೂರ ಪರ ಎಲ್ಲೆಡೆ ಉತ್ತಮ ಸ್ಪಂದನೆ
ವಿವಾಹಿತೆ ಸಾವು: ಪತಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು