ಭಾರೀ ಮಳೆಗೆ ನಾಟಿ ಮಾಡಿದ್ದ ಭತ್ತದ ಪೈರು, ಕಬ್ಬಿನ ಬೆಳೆ ನಾಶ

KannadaprabhaNewsNetwork |  
Published : Sep 17, 2026, 01:45 AM IST
16ಕೆಎಂಎನ್ ಡಿ29 | Kannada Prabha

ಸಾರಾಂಶ

ಭಾರೀ ಮಳೆಯಿಂದಾಗಿ ಗ್ರಾಮದ ಸೇತುವೆಗಳು ಉಕ್ಕಿ ಹರಿದಿದೆ. ಹಲವು ದಿನಗಳ ನಂತರ ಮಳೆಯಾಗಿರುವುದು ರೈತರಲ್ಲಿ ಒಂದೆಡೆ ಸಂತಸ ತಂದರೆ, ಕೆರೆ, ಕಟ್ಟೆ, ಹಳ್ಳಗಳು, ಬೋರ್ ವೆಲ್ , ಪಂಪ್ ಸೆಟ್ ಗಳನ್ನು ನಂಬಿ ಹಾಕಿದ್ದ ಬೆಳೆಗಳು ಮಳೆಯಿಂದ ಹಾನಿಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಡ್ಯ:

ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ದೊಡ್ಡಬಾಣಸವಾಡಿ ಗ್ರಾಮದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಹಾಕಿದ್ದ ಭತ್ತ ನಾಟಿ ಸೇರಿದಂತೆ ಕಬ್ಬಿನ ಬೆಳೆಗೆ ಹಾನಿಯಾಗಿರುವ ಘಟನೆ ನಡೆದಿದೆ.

ಗ್ರಾಮದ ನಿತಿನ್ ಎಂಬುವವರಿಗೆ ಎರಡು ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದರು. ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಭತ್ತ ನಾಟಿ ಕೊಚ್ಚಿ ಹೋಗಿ ಸಾವಿರಾರು ರು. ನಷ್ಟವಾಗಿವೆ. ಅಲ್ಲದೇ ಗ್ರಾಮದ ಹಲವು ರೈತರ ಜಮೀನುಗಳಲ್ಲಿ ಹಾಕಿದ್ದ ಭತ್ತ ನಾಟಿ, ಬೆಳೆದಿದ್ದ ಕಬ್ಬಿನ ಬೆಳೆಯೂ ನೀರಿನಿಂದ ಜಲಾವೃತವಾಗಿದೆ.

ಭಾರೀ ಮಳೆಯಿಂದಾಗಿ ಗ್ರಾಮದ ಸೇತುವೆಗಳು ಉಕ್ಕಿ ಹರಿದಿದೆ. ಹಲವು ದಿನಗಳ ನಂತರ ಮಳೆಯಾಗಿರುವುದು ರೈತರಲ್ಲಿ ಒಂದೆಡೆ ಸಂತಸ ತಂದರೆ, ಕೆರೆ, ಕಟ್ಟೆ, ಹಳ್ಳಗಳು, ಬೋರ್ ವೆಲ್ , ಪಂಪ್ ಸೆಟ್ ಗಳನ್ನು ನಂಬಿ ಹಾಕಿದ್ದ ಬೆಳೆಗಳು ಮಳೆಯಿಂದ ಹಾನಿಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಸುಮಾರು 10 ರಿಂದ 12 ಎಕರೆ ಪ್ರದೇಶದಲ್ಲಿ ಪ್ರಸ್ತುತ ಹಾಕಿದ್ದ ಭತ್ತದ ನಾಟಿ, ಕಬ್ಬಿನ ಬೆಳೆ ಮಳೆಯಿಂದ ಹಾನಿಯಾಗಿದೆ. ಕೆರೆ ಬಯಲಿನಲ್ಲಿರುವ ನಮ್ಮ ಜಮೀನಿಗೆ ಪ್ರತಿ ವರ್ಷ ಈ ರೀತಿ ಭಾರಿ ಮಳೆಯಾದರೆ ಬೆಳೆಗಳಿಗೆ ಹಾನಿಯಾಗುತ್ತಿದೆ. ಹಲವು ರೈತರ ಜಮೀನುಗಳಿಗೂ ತೊಂದರೆಯಾಗಿದೆ.

ಜಮೀನಿನ ಪಕ್ಕದಲ್ಲಿರುವ ಕಾಲುವೆಯಲ್ಲಿ ಬಹುತೇಕ ಹೂಳು ತುಂಬಿ ಮಳೆ ಬಂದಾಗ ನೀರು ಜಮೀನುಗಳಿಗೆ ನುಗ್ಗುತ್ತಿದೆ. ಕಾಲುವೆಯಲ್ಲಿ ತುಂಬಿರುವ ಹೂಳನ್ನು ತೆಗೆದು, ಅಗಲ ಮಾಡಿದರೆ ನೀರು ಸರಾಗವಾಗಿ ಹರಿಯುತ್ತದೆ. ಈ ಬಗ್ಗೆ ಕ್ಷೇತ್ರದ ಶಾಸಕರು, ಸಚಿವರ ಗಮನಕ್ಕೂ ತಂದು ಮನವಿ ಸಲ್ಲಿಸಿದ್ದೇನೆ. ಕೂಡಲೇ ಕಾಲುವೆ ಅಭಿವೃದ್ಧಿ ಪಡಿಸಿ ರೈತರಿಗೆ ನೆರವಾಗಬೇಕು ಎಂದು ರೈತ ನಿತಿನ್ ಆಗ್ರಹಿಸಿದ್ದಾರೆ.ರೈತರ ಮುಖದಲ್ಲಿ ಮಂದಹಾಸ ತರಿಸಿದ ಮಳೆ

ಹಲಗೂರು:ಮುಂಗಾರು ಮಳೆ ಇಲ್ಲದೆ ಬಿಸಿಲಿನ ತಾಪದಿಂದ ಬಸವಳಿದಿದ್ದ ರೈತರು, ಜನಸಾಮಾನ್ಯರ ಮುಖದಲ್ಲಿ ಗೌರಿ ಗಣೇಶ ಹಬ್ಬದ ಮಾರನೇ ದಿನ ಭಾರಿ ಸುರಿದು ಸಂತಸ ತರಿಸಿದೆ.

ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮದವರು ಮಳೆ ಆಶ್ರಯದಲ್ಲೇ ವ್ಯವಸಾಯ ಮಾಡಿಕೊಂಡು ಜೀವನ ನಡೆಸಬೇಕಾಗಿದೆ. ಈ ಬಾಗದಲ್ಲಿ ಮಳೆ ಇಲ್ಲದೆ ವ್ಯವಸಾಯವಿಲ್ಲ. ಸಾಮಾನ್ಯವಾಗಿ ಯುಗಾದಿ ಹಬ್ಬ ಸಂದರ್ಭದಲ್ಲಿ ಮಳೆಯಾಗಿ ರೈತರು ತಮ್ಮ ಜಮೀನುಗಳನ್ನು ಹಸನು ಮಾಡಿಕೊಂಡು ವ್ಯವಸಾಯಕ್ಕೆ ಸಿದ್ಧತೆಗೊಳಿಸಿಕೊಳ್ಳುತ್ತಿದ್ದರು.ಆದರೆ, ಈ ಬಾರಿ ಮಳೆ ಸೂಚನೆಯೂ ಇಲ್ಲದೆ ಬಿಸಿಲಿನ ತಾಪ ಹೆಚ್ಚಾಗಿತ್ತು. ದನಕರುಗಳಿಗೂ ಮೇವು ಸಿಗದೇ ಪರಿತಪಿಸುತ್ತಿದ್ದ ರೈತರಿಗೆ ಹಲಗೂರಿನಲ್ಲಿ ಸೋಮವಾರ ಸಾಧಾರಣ ಮಳೆ, ಮಂಗಳವಾರ ರಾತ್ರಿಪೂರ ಭಾರೀ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇದರಿಂದ ಮುಂದಿನ ವ್ಯವಸಾಯ ಮಾಡಿಕೊಳ್ಳುವುದಕ್ಕೆ ತಮ್ಮ ಜಮೀನುಗಳನ್ನು ಹಸನು ಮಾಡಿಕೊಳ್ಳಲು ಸಹಕಾರಿಯಾಗಿದೆ.ಹಲಗೂರು ಸೇರಿ ಹೋಬಳಿಯಾದ್ಯಂತ ವಿದ್ಯಾ ಗಣಪತಿನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವ ಪೂರಕವಾಗಿ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದ್ದರಿಂದ ಸಕಾಲಕ್ಕೆ ಮಳೆಯಾಗಿ ರೈತರಿಗೆ ಅನುಕೂಲವಾಗಿದೆ ವಿದ್ವಾನ್ ಪ್ರಸಾದ್ ತಿಳಿಸಿದ್ದಾರೆ.

ಸಾಗ್ಯ ಗ್ರಾಮದ ಎಸ್.ಕೆ.ಶಿವಕುಮಾರ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷದಲ್ಲೂ ಮಳೆಯಾಗಿದ್ದರೆ ರೈತರು ಎಳ್ಳು, ರಾಗಿ, ಮತ್ತು ಮನೆಗೆ ಬೇಕಾದ ದವಸ ಧಾನಗಳನ್ನು ಬೆಳೆದುಕೊಂಡು ಸುಖ ಜೀವನ ನಡೆಸಲು ಸಹಕಾರಿಯಾಗುತ್ತಿತ್ತು. ಆದರೆ, ಮಳೆ ಇಲ್ಲದೆ ವ್ಯವಸಾಯ ಮಾಡಲು ಆಗದೆ ಸಾಲ ಮಾಡಿ ಜೀವನ ನಡೆಸುವ ಪರಿಸ್ಥಿತಿ ತಲೆದೂರಿತ್ತು. ಮಂಗಳವಾರ ರಾತ್ರಿ ಬಿದ್ದ ಮಳೆಯಿಂದ ದನ ಕರುಗಳಿಗೆ ಕುಡಿಯುಲು ನೀರು, ಮೇವಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.ಗೊಲ್ಲರಹಳ್ಳಿ ನಾಗರಾಜು ಮಾತನಾಡಿ, ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿರುವ ಈ ಭಾಗದ ರೈತರು ಹಾಲು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವೆ. ಈ ವರ್ಷ ಮಳೆ ಇಲ್ಲದೆ ದನ ಕರುಗಳಿಗೆ ಮೇವು ಇಲ್ಲದೆ ದನ ಕರುಗಳು ಸಾಕುವುದೇ ಕಷ್ಟವಾಗುತ್ತಿತ್ತು. ದೇವರ ಕೃಪೆ ನೆನ್ನೆ ರಾತ್ರಿ ಮಳೆ ಆಗಿ ಜಮೀನಿನ ಪಂಪ್ ಸೆಟ್ ಗಳ ಅಂತರ್ಜಲ ಹೆಚ್ಚಾಗಿ ನೀರು ಲಭ್ಯವಾಗುತ್ತದೆ. ವ್ಯವಸಾಯ ಹಾಗೂ ದನಕರುಗಳಿಗೆ ಮೇವಿಗೂ ಅನುಕೂಲವಾಗತ್ತದೆ. ಮುಂದೆಯೂ ವರುಣನ ಕೃಪೆ ರೈತರ ಮೇಲಿರಲಿ ಎಂದು ಗಣೇಶನದಲ್ಲಿ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ವಿಶ್ವಕರ್ಮ ಮಹೋತ್ಸವ ಆಚರಣೆಗೆ ಸಿದ್ಧತೆ
ರೈಲ್ವೆ ಭೂಸ್ವಾಧೀನ ಪರಿಹಾರದಲ್ಲಿ ಅಕ್ರಮ ಆರೋಪ