ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಮೆಟ್ರೋ ರೈಲು ನಿಗಮ ಇದೇ ಮೊದಲ ಬಾರಿಗೆ ‘ಟ್ರಾವೆಲೆಟರ್’ ಒಳಗೊಂಡ 250 ಮೀಟರ್ ಉದ್ದದ ಸ್ಕೈ ವಾಕ್ ನಿರ್ಮಿಸುತ್ತಿದೆ. ವಿಪರೀತ ಸಂಚಾರ ದಟ್ಟಣೆಯಿರುವ ಸಿಲ್ಕ್‌ಬೋರ್ಡ್ ಜಂಕ್ಷನ್ ಬಳಿ ನಿರ್ಮಾಣ ಆಗಲಿರುವ ಈ ಸ್ಕೈ ವಾಕ್ ಹಳದಿ ಹಾಗೂ ನೀಲಿ ಮೆಟ್ರೋ ಕಾರಿಡಾರ್ ಸಂಧಿಸಲಿದೆ.
ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಇಬ್ಭಾಗಿಸುವ ಸೆಂಟ್ರಲ್ ಸಿಲ್ಕ್‌ಬೋರ್ಡ್ (ಸಿಎಸ್‌ಬಿ) ಜಂಕ್ಷನ್ ಜನದಟ್ಟಣೆ ನಿವಾರಣೆಗೆ ಈ ಸ್ಕೈ ವಾಕ್ ಹೆಚ್ಚು ಸಹಕಾರಿಯಾಗಲಿದೆ.
ಇಲ್ಲಿಯೇ ನಿರ್ಮಾಣ ಆಗುತ್ತಿರುವ ಐದು ರ್ಯಾಂಪ್‌ಗಳಲ್ಲಿ ಮೂರು ರ್ಯಾಂಪ್ ಮೇ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗ (ಆರ್.ವಿ.ರಸ್ತೆ-ಬೊಮ್ಮಸಂದ್ರ) ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ.ಆರ್.ಪುರ ಸ್ಟೇಷನ್ (ಹೊರವರ್ತುಲ ರಸ್ತೆ) ಮೂಲಕ ವಿಮಾನ ನಿಲ್ದಾಣದೆಡೆಗೆ ಹೋಗುವ ನೀಲಿ ಮಾರ್ಗ ಈಗಾಗಲೇ ಪ್ರಗತಿಯಲ್ಲಿದೆ.
ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಡಬಲ್ ಡೆಕ್ಕರ್ (ಮೆಟ್ರೋ ಕಂ ರಸ್ತೆ) ನಿರ್ಮಾಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ.
ಇಲ್ಲಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣ ಹಾಗೂ ಕೃಷ್ಣರಾಜಪುರ ನಿಲ್ದಾಣವನ್ನು 250 ಮೀ. ಸ್ಕೈ ವಾಕ್ ಮೂಲಕ ಸಂಪರ್ಕಿಸಲಾಗುತ್ತಿದೆ. ಇದರಲ್ಲಿ ಟ್ರಾವೆಲೆಟರ್ ಇರಲಿದ್ದು, ನಮ್ಮ ಮೆಟ್ರೋದಲ್ಲಿ ಮೊದಲ ಬಾರಿ ಇದರ ಬಳಕೆಯಾಗುತ್ತಿದೆ.
ಇದರ ಜೊತೆಗೆ ಸಿಎಸ್‌ಬಿ ಜಂಕ್ಷನ್‌ನಲ್ಲಿ ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಲಿ. ಐದು ರ್ಯಾಂಪ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಹಳದಿ ಮಾರ್ಗದ ಡಬಲ್ ಡೆಕ್ಕರ್ (ರಸ್ತೆ ಕಂ ಮೆಟ್ರೋ) ಬಳಸಿ ರಾಗಿಗುಡ್ಡ ಕಡೆಯಿಂದ ಬರುವ ವಾಹನ ಸವಾರರು ರ‍್ಯಾಂಪ್ ಎ ಮೂಲಕ ಹೊಸೂರು ರಸ್ತೆ ತಲುಪಲು ಸಾಧ್ಯವಾಗಲಿದೆ.
ರ್ಯಾಂಪ್ ಸಿ ಮೂಲಕ ಎಚ್‌ಎಸ್‌ಆರ್ ಲೇಔಟ್ ತಲುಪಬಹುದು. ಉಳಿದಂತೆ ಇತರ ಡಿ, ಇ ರ್ಯಾಂಪ್‌ಗಳು ಹೊಸೂರು ರಸ್ತೆ ಪ್ರವೇಶ, ಬಿಟಿಎಂ ಲೇಔಟ್ ಸಂಪರ್ಕಿಸಲಿವೆ.
ರ್ಯಾಂಪ್ ಎ ಹಾಗೂ ರ್ಯಾಂಪ್ ಬಿ ರಾಷ್ಟ್ರೀಯ ಹೆದ್ದಾರಿಗುಂಟ (ಎನ್‌ಎಚ್-44) ಮಡಿವಾಳ ಫ್ಲೈಓವರ್‌ನಲ್ಲಿ ವಿಲೀನವಾಗಿ ಮುಂದುವರಿಯಲಿವೆ. ಇದಕ್ಕಾಗಿ ಸಾಲಿಡ್ ಸ್ಲ್ಯಾಬ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ.
ಈಗಾಗಲೇ ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್‌ವರೆಗೆ ಮೊದಲ ಹಂತದ ಮೇಲ್ಸೇತುವೆ ನಿರ್ಮಿಸಲಾಗಿದೆ. ಎ, ಬಿ, ಸಿ ರ್ಯಾಂಪ್‌ಗಳು ಮುಂದಿನ ಮೇ ತಿಂಗಳೊಳಗೆ ಮತ್ತು ಡಿ, ಮತ್ತು ಇ ರ್ಯಾಂಪ್ ವರ್ಷಾಂತ್ಯಕ್ಕೆ ಕಾರ್ಯಾರಂಭ ಆಗಲಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಿಂದ ಒಟ್ಟಾರೆ ಸಿಲ್ಕ್‌ಬೋರ್ಡ್ ಜಂಕ್ಷನ್ ಬಳಿ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.50 ತಾಸಿನಲ್ಲಿ ಸಾಲಿಡ್ ಸ್ಲ್ಯಾಬ್ ಕೆಲಸ ಪೂರ್ಣ
ಸೆಂಟ್ರಲ್ ಸಿಲ್ಕ್‌ಬೋರ್ಡ್ ಜಂಕ್ಷನ್ ಬಳಿ ಬಿಎಂಆರ್‌ಸಿಎಲ್ ಎಂಜಿನಿಯರ್‌ಗಳ ನೇತೃತ್ವದಲ್ಲಿ ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಲಿ. ಕಂಪನಿಯು 124 ಮೀ ಉದ್ದ, (52-ಮೀಟರ್ ತಿರುವು ಒಳಗೊಂಡ) 15.1 ಮೀಟರ್ ಅಗಲದ ಸಾಲಿಡ್ ಸ್ಲ್ಯಾಬ್ ನಿರ್ಮಿಸಿದೆ. 50 ಗಂಟೆಗಳ ಕಾಮಗಾರಿಯೊಂದಿಗೆ ಈ ಫ್ಲೈಓವರ್ ಭಾಗವನ್ನು ಭಾನುವಾರ ರಾತ್ರಿ ರೂಪಿಸಲಾಗಿದೆ.