ಪರಿಷತ್‌ ಸದಸ್ಯ ಐವಾನ್ ಡಿಸೋಜಾರಿಂದ ದೇಶದ್ರೋಹಿ ಹೇಳಿಕೆ: ಆರ್.ಅಶೋಕ್

KannadaprabhaNewsNetwork |  
Published : Aug 23, 2024, 01:07 AM IST
22ಕೆಎಂಎನ್ ಡಿ1 | Kannada Prabha

ಸಾರಾಂಶ

ಬಾಂಗ್ಲಾದೇಶ ಮಾಡುವುದಕ್ಕೆ ಇದು ಭಾರತ. ಗಂಡುಮೆಟ್ಟಿನ ನಾಡಿದು. ಇಲ್ಲಿ ಅಂತಹವೆಲ್ಲ ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಇದು ಬಾಂಗ್ಲಾದೇಶನೂ ಅಲ್ಲ, ಪಾಕಿಸ್ತಾನವೂ ಅಲ್ಲ. ದ್ವೇಷದ ವಿಷಬೀಜ ಬಿತ್ತುವ ಇಂತಹವರನ್ನು ಸಮರ್ಥಿಸಿಕೊಳ್ಳುತ್ತಾರೆಂದರೆ ಇದೇ ಕಾಂಗ್ರೆಸ್ಸಿಗರ ಅಜೆಂಡಾ ಎನ್ನುವುದು ಅರ್ಥವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕದ ರಾಜ ಭವನಕ್ಕೆ ಬಾಂಗ್ಲಾ ದೇಶದಲ್ಲಾದ ಗತಿಯೇ ಆಗುವುದಾಗಿ ಹೇಳಿಕೆ ನೀಡಿರುವ ಐವಾನ್ ಡಿಸೋಜಾ ಶಾಸಕನಾಗಿರಲು ಯೋಗ್ಯನಲ್ಲ. ಆತನದ್ದು ದೇಶದ್ರೋಹಿ ಹೇಳಿಕೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ರಾಜ್ಯಪಾಲರಿಗೆ ಕಾಂಗ್ರೆಸ್ ಅವಮಾನ ಖಂಡಿಸಿ ಹಾಗೂ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಗುರುವಾರ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬಿಜೆಪಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಏಜೆಂಟಾಗಿರುವ ಐವಾನ್ ಡಿಸೋಜಾ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ. ಅಂದರೆ, ಕರ್ನಾಟಕದಲ್ಲೂ ಹಿಂದೂಗಳ ಮೇಲೆ ಹಲ್ಲೆ ಮಾಡುತ್ತೀರಾ, ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತೀರಾ, ಹಿಂದೂ ದೇಗುಲಗಳನ್ನು ಒಡೆದುಹಾಕುತ್ತೀರಾ, ರಾಜಭವನಕ್ಕೆ ನುಗ್ಗುತ್ತೀರಾ. ಇಂತಹ ಹೇಳಿಕೆ ನೀಡಿರುವ ಐವಾನ್ ಡಿಸೋಜಾರನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಬಾಂಗ್ಲಾದೇಶ ಮಾಡುವುದಕ್ಕೆ ಇದು ಭಾರತ. ಗಂಡುಮೆಟ್ಟಿನ ನಾಡಿದು. ಇಲ್ಲಿ ಅಂತಹವೆಲ್ಲ ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಇದು ಬಾಂಗ್ಲಾದೇಶನೂ ಅಲ್ಲ, ಪಾಕಿಸ್ತಾನವೂ ಅಲ್ಲ. ದ್ವೇಷದ ವಿಷಬೀಜ ಬಿತ್ತುವ ಇಂತಹವರನ್ನು ಸಮರ್ಥಿಸಿಕೊಳ್ಳುತ್ತಾರೆಂದರೆ ಇದೇ ಕಾಂಗ್ರೆಸ್ಸಿಗರ ಅಜೆಂಡಾ ಎನ್ನುವುದು ಅರ್ಥವಾಗುತ್ತದೆ ಎಂದು ದೂರಿದರು.

ಐವಾನ್ ಡಿಸೋಜಾರವರ ಹೇಳಿಕೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸದಿದ್ದರೆ ಅದೇ ದೊಡ್ಡ ವಿಚಾರವಾಗಲಿದೆ. ಅವರನ್ನು ನಾವು ಇಲ್ಲಿಗೇ ಬಿಡುವುದಿಲ್ಲ. ಇದು ದೇಶದ್ರೋಹದ ಕೆಲಸ. ಹಿಂದೂಗಳ ಮೇಲೆ ದೌರ್ಜನ್ಯ ನಡೆಸುವಂತಹ ಹೇಳಿಕೆ ನೀಡಿದ್ದಾರೆ. ದಲಿತ ರಾಜ್ಯಪಾಲರ ಮೇಲೆ ಈ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ. ರಾಜ್ಯಪಾಲರನ್ನು ಏಕವಚನದಲ್ಲಿ ನಿಂದಿಸುವುದು, ಅವರ ಪ್ರತಿಕೃತಿಗೆ ಬೆಂಕಿ ಹಚ್ಚುವುದು, ಚಪ್ಪಲಿಯಲ್ಲಿ ಹೊಡೆಯುವುದು ಇವೆಲ್ಲವೂ ದಲಿತರನ್ನು ಅವಹೇಳನ ಮಾಡಿದ್ದಾರೆ. 16 ಸೈಟು ನುಂಗಿರುವ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ. ಇದು ಕಾಂಗ್ರೆಸ್‌ನ ನಿಲುವು ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ತಪ್ಪೇ ಮಾಡಿಲ್ಲವೆಂದ ಮೇಲೆ ಸಿಎಲ್‌ಪಿ ಮೀಟಿಂಗ್ ಕರೆದಿರುವ ಉದ್ದೇಶವೇನು?, ಜನರ ಮುಂದೆ ಮರ್ಯಾದೆ ಸಿಗಲಿಲ್ಲ. ಹಾಗಾಗಿ ಈಗ ಶಾಸಕರನ್ನು ಕೂರಿಸಿಕೊಂಡು ನಾನು ತಪ್ಪು ಮಾಡಿಲ್ಲ ಅಂತ ಹೇಳುತ್ತಿದ್ದಾರೆ. ನಾಳೆ ಹೈಕಮಾಂಡ್ ಮುಂದೆಯೂ ಇದೇ ರಾಗ ಹಾಡ್ತಾರೆ. ಸಿದ್ದರಾಮಯ್ಯ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡಿದ್ದಾರೆ. ಅದಕ್ಕೇ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಇವರ ಕಳ್ಳತನವನ್ನು ಮುಚ್ಚಿಕೊಳ್ಳುವುದಕ್ಕೆ ರಾಜ್ಯಪಾಲರನ್ನು ದೂರುತ್ತಿದ್ದಾರೆ ಎಂದು ದೂಷಿಸಿದರು.

ಸಿದ್ದರಾಮಯ್ಯನವರು ಮುಡಾ ಹಗರಣದಲ್ಲಿ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡಿದ್ದಾರೆ. ಈಗ ಅಧಿಕಾರ ಕಳೆದುಕೊಳ್ಳುವ ಭಯದಿಂದ ಜಾತಿಯನ್ನು ಮುಂದೆ ತರುತ್ತಿದ್ದಾರೆ. ಕಳ್ಳನಿಗೆ, ಅತ್ಯಾಚಾರ ಮಾಡುವವನಿಗೆ ಯಾವುದಾದರೂ ಜಾತಿ ಇರುತ್ತದೆಯೇ ಎಂದು ನೇರವಾಗಿ ಪ್ರಶ್ನಿಸಿದರುವ ಅವರು, ಸಿದ್ದರಾಮಯ್ಯನವರು ಯಾವುದೋ ಒಂದು ಜಾತಿಗೆ ಮುಖ್ಯಮಂತ್ರಿಯಲ್ಲ, ಒಂದು ಜಾತಿಯಿಂದಷ್ಟೇ ಅವರು ಆ ಹುದ್ದೆಗೇರಿಲ್ಲ. ಅವರು ರಾಜ್ಯದ ಎಲ್ಲ ಜನರಿಗೂ ಮುಖ್ಯಮಂತ್ರಿ. ತಪ್ಪು ಮಾಡಿಲ್ಲವೆಂದರೆ ಪ್ರಾಸಿಕ್ಯೂಷನ್ ಎದುರಿಸಿ, ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಂಡು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ತನಿಖೆಯನ್ನೇ ಮಾಡಬಾರದು ಎಂದರೆ ಅದು ತುಘಲಕ್ ದರ್ಬಾರ್ ಎಂದು ಆಪಾದಿಸಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಸರ್ಕಾರ, ಪೇ-ಸಿಎಂ ಎಂದೆಲ್ಲಾ ಟೀಕಿಸಿದರು. ಕಳೆದ 15 ತಿಂಗಳ ಅವಧಿಯಲ್ಲಿ ಏಕೆ ಆ ಬಗ್ಗೆ ತನಿಖೆ ನಡೆಸಲಿಲ್ಲ. ಈಗ ಅದಕ್ಕೆ ನಾವು ಅದನ್ನು ಸಾಬೀತುಪಡಿಸುವಂತೆ ವಿರುದ್ಧವಾಗಿ ಪ್ರಕರಣ ದಾಖಲಿಸಿದ್ದೇವೆ. ಅದರಲ್ಲಿ ಈಗಾಗಲೇ ಹಲವರು ಜಾಮೀನು ಪಡೆದುಕೊಂಡಿದ್ದಾರೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜೈಲಿಗೆ ಹಾಕಿಸುವುದಕ್ಕೆ ಬಹಳ ದಿನದಿಂದ ಪ್ರಯತ್ನ ಮಾಡುತ್ತಲೇ ಇದ್ದಾರೆ. ದೇವೇಗೌಡರ ಕುಟುಂಬದ ಮೇಲೆ ದ್ವೇಷ ಮುಂದುವರೆಸಿದ್ದು, ಎಚ್.ಡಿ.ರೇವಣ್ಣ ಅವರನ್ನು ಜೈಲಿಗೆ ಹಾಕಿಸಿ ಆಗಿದೆ. ಈಗ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ನಾವು ಕುಮಾರಸ್ವಾಮಿ ಜೊತೆ ಇರುವುದಾಗಿ ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಎಸ್.ಪಿ.ಸ್ವಾಮಿ, ಅಶೋಕ್ ಜಯರಾಂ, ಡಾ.ಸದಾನಂದ, ಎಚ್.ಆರ್.ಅರವಿಂದ್, ವಸಂತಕುಮಾರ್, ಸಿ.ಟಿ.ಮಂಜುನಾಥ, ಶಿವಕುಮಾರ ಆರಾಧ್ಯ, ಸಿದ್ದರಾಜು, ಕೇಶವ, ನಾಗಾನಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ