ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಿಸಲ್ಪಟ್ಟ ಆಶಾ ಕಾರ್ಯಕರ್ತೆಯರು ಆರೋಗ್ಯ ಕ್ಷೇತ್ರದ ಅತ್ಯಂತ ಕೆಳಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಸ್ವಾಸ್ಥ್ಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್ ತಿಳಿಸಿದರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ಎಐಯುಟಿಯುಸಿ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ರಾಜ್ಯದಲ್ಲಿ 2008-2009 ನೇ ಸಾಲಿನಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳಲಾಯಿತು. ರಾಜ್ಯದಲ್ಲಿ ಸುಮಾರು 42,000 ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದು, ಅವರೆಲ್ಲರೂ ಆಯಾ ಗ್ರಾಮದ ಹಾಗೂ ನಗರ ಪ್ರದೇಶದ ಹೆಣ್ಣು ಮಕ್ಕಳಾಗಿದ್ದಾರೆ. ಇಲಾಖೆಯ ಮಾನದಂಡಕ್ಕೆ ಅನುಗುಣವಾಗಿ ಇವರಲ್ಲಿ ಬಹುತೇಕ ಮಂದಿ ವಿಧವೆಯರು, ವಿಚ್ಛೇದಿತರು, ಒಬ್ಬಂಟಿ ಮಹಿಳೆಯರಾಗಿದ್ದು, ಸ್ವಾವಲಂಬಿಗಳಾಗಿ ಬದುಕುವ ಛಲ ಹೊತ್ತಿರುವ ಮಹಿಳೆಯರಾಗಿದ್ದಾರೆ. ಕೊರೋನಾ ಕಾಲಘಟ್ಟದಲ್ಲಿ ಅವರ ಅನುಪಮ ಸೇವೆಯನ್ನು ಗುರುತಿಸಿ ನಮ್ಮ ಸರ್ಕಾರ ‘ಕೊರೋನಾ ವಾರಿಯರ್ಸ್’ ಎಂದು ಗುರುತಿಸಿದರೆ, ವಿಶ್ವ ಆರೋಗ್ಯ ಸಂಸ್ಥೆಯು ‘ಜಾಗತಿಕ ಆರೋಗ್ಯ ನಾಯಕರು’ ಎಂದು ಶ್ಲಾಘಿಸಿತು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಮಾತನಾಡಿ, ಆಳುವ ಸರ್ಕಾರಗಳು ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸದೇ ಪ್ರೋತ್ಸಾಹ ಧನದ ಹೆಸರಿನಲ್ಲಿ ದುಡಿಸಿಕೊಳ್ಳುತ್ತಾ ಕಾರ್ಮಿಕರಿಗೆ ಸಿಗಬೇಕಾದ ಶಾಸನಬದ್ಧ ಸೌಲಭ್ಯಗಳಿಂದ ವಂಚಿಸುತ್ತಿವೆ. ಇದೀಗ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾ ತಮ್ಮ ಹೋರಾಟದ ಹಾದಿಯನ್ನು ಪುನರಾವಲೋಕಿಸುತ್ತಾ ಸ್ಪಷ್ಟ ವಿಚಾರ, ನಿಲುವುಗಳೊಂದಿಗೆ ಒಗ್ಗಟ್ಟನ್ನು ಬೆಸೆದುಕೊಂಡು ಗುರಿ ಮುಟ್ಟಲು ಹಾಗೂ ಐಕ್ಯ ಹೋರಾಟವನ್ನು ಇನ್ನಷ್ಟು ಉನ್ನತ ಹಂತಕ್ಕೆ ಕೊಂಡೊಯ್ಯಲು ಸೆಪ್ಟಂಬರ್ 14 ಮತ್ತು 15 ರಂದು ಪ್ರಥಮ ರಾಜ್ಯ ಸಮ್ಮೇಳನ ನಡೆಸುತ್ತಿದೆ ಎಂದರು.ಆಶಾ ಕಾರ್ಯಕರ್ತೆಯರ ಆಯ್ಕೆಗಿಂತಲೂ ಮುಂಚಿನ ಆರೋಗ್ಯ ಕ್ಷೇತ್ರದ ಪರಿಸ್ಥಿತಿ:
ಗ್ರಾಮಾಂತರ ಪ್ರದೇಶಗಳಲ್ಲಿ ಶಿಶು ಮರಣ, ತಾಯಿ ಮರಣ, ಮನೆ ಹೆರಿಗೆ ಪ್ರಮಾಣ ಈ ಹಿಂದೆ ಆತಂಕಕಾರಿಯಾಗಿತ್ತು. ಇತ್ತೀಚಿನವರೆಗೂ ಪ್ರತಿ 1000 ಜನನಕ್ಕೆ ಸುಮಾರು 50 ಶಿಶು ಮರಣ ಸಂಭವಿಸುತ್ತಿತ್ತು. ತಾಯಿ ಮರಣವೂ ಹೆಚ್ಚಿತ್ತು. ಇಲಾಖೆಯೇ ಹೇಳುವಂತೆ ಆಶಾ ಕಾರ್ಯಕರ್ತೆಯರ ಆಯ್ಕೆಯ ನಂತರ ಶಿಶು ಹಾಗೂ ತಾಯಿ ಮರಣದ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸಾಂಸ್ಥಿಕ ಹೆರಿಗೆ ಅಭಿವೃದ್ಧಿ ಹೊಂದಿದೆ. ಒಟ್ಟಾರೆಯಾಗಿ ವಿವಿಧ ಆರೋಗ್ಯ ಸೂಚಿ ಮಾಪಕಗಳು ಹೆಚ್ಚಿವೆ. ಇಂದು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ತಾಯಿ ಬೇರುಗಳಂತೆ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿಕೊಂಡಿದ್ದಾರೆಂದರು.ಇಷ್ಟೆಲ್ಲಾ ಪ್ರಶಂಸೆಗಳ ಸುರಿಮಳೆ ಇದ್ದರೂ ಅವರ ಜೀವನವು ಸುಗಮವಾದದ್ದಲ್ಲ. ಅನೇಕ ಅಡೆತಡೆಗಳನ್ನು ಮೀರಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಡಿಯಲ್ಲಿ ಆಶಾ ಕಾರ್ಯಕರ್ತೆಯರು ರಾಜ್ಯದ ಉದ್ದಗಲಕ್ಕೂ ಒಗ್ಗೂಡಿ ನಿಗದಿತ ವೇತನಕ್ಕಾಗಿ ಹೋರಾಡಿದರು. ಚಳಿ, ಮಳೆ ಎನ್ನದೆ ತಮ್ಮ ಪುಟ್ಟ ಕಂದಮ್ಮಗಳನ್ನು ಕರೆತಂದು ಚಳವಳಿಯಲ್ಲಿ ಭಾಗಿಯಾದರು. ಹೋರಾಟದ ಪರಿಣಾಮವಾಗಿ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನಕ್ಕೆ ಸರಿ ಸಮಾನವಾಗಿ ರಾಜ್ಯ ಸರ್ಕಾರವು ಮ್ಯಾಚಿಂಗ್ ಗ್ರಾಂಟ್ ನೀಡಲು ಒಪ್ಪಿಗೆ ಸೂಚಿಸಿತು. ತದನಂತರ ನಿಶ್ಚಿತ ವೇತನ ನೀಡಲು ಆಗ್ರಹಿಸಿ ಹೋರಾಟ ಬೆಳೆಸಲಾಯಿತು. ಸತತ ಹೋರಾಟದ ಪರಿಣಾಮವಾಗಿ ನಿಶ್ಚಿತ ವೇತನವೂ ಜಾರಿಯಾಯಿತು. ಇದರ ಮಧ್ಯೆ ಆರ್ ಸಿ ಎಚ್ ಪೋರ್ಟಲ್ ಎಂಬ ಹೊಸ ಸಾಫ್ಟ್ ವೇರ್ ಅನ್ನು ಅಳವಡಿಸಿ ಪ್ರೋತ್ಸಾಹಧನ ನೀಡುವುದಕ್ಕೆ ಲಿಂಕ್ ಮಾಡಲಾಯಿತು. ಈ ಕಾರಣದಿಂದಾಗಿ ಪಾವತಿಯಾಗದೇ ಇರುವ ಪ್ರೋತ್ಸಾಹ ಧನದ ದಾಖಲೆಗಳನ್ನು ಇಲಾಖೆಗೆ ನೀಡಲಾಗಿದೆ. ಇವರಿಗಾಗಿ ಮೀಸಲಾಗಿರುವ ಸುಮಾರು 40 ಮಾಸಿಕ ನಿಗದಿತ ಕಾರ್ಯಕ್ರಮಗಳಿಗೆ ಅತ್ಯಲ್ಪ ಸಂಭಾವನೆ ಮತ್ತು ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಬಗ್ಗೆ ಇಲಾಖೆಯು ಅತ್ಯಂತ ನಿರ್ಲಕ್ಷ್ಯ ಧೋರಣೆಯನ್ನು ಹೊಂದಿದೆ. ಇದೀಗ ಆರ್ ಸಿ ಎಚ್ ಪೋರ್ಟಲ್ ಎಂಬ ಭೂತ ಬೃಹದಾಕಾರವಾಗಿ ಬೆಳೆದು ಅವರ ದುಡಿತಕ್ಕೆ ತಕ್ಕ ಪ್ರತಿಫಲ ದೊರಕುತ್ತಿಲ್ಲ. ಆದುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಎರಡೂ ಸರ್ಕಾರಗಳು ಸೇರಿ ಕನಿಷ್ಠ 15 ಸಾವಿರ ರು.ಗಳನ್ನು ಮಾಸಿಕ ವೇತನವಾಗಿ ನೀಡಬೇಕು ಮತ್ತು ನಿವೃತ್ತಿಯ ನಂತರ ಮೂರು ಲಕ್ಷ ಇಡಿ ಗಂಟು ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮಕ್ಕೂ ಮೊದಲು ಆಶಾ ಕಾರ್ಯಕರ್ತೆಯರು ನಗರದಲ್ಲಿ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ಎಐಯುಟಿಯುಸಿ ರಾಜ್ಯಾ ಉಪಾಧ್ಯಕ್ಷರಾದ ವಿ.ಎನ್.ರಾಜಶೇಖರ್, ಟಿ.ಸಿ. ರಮಾ, ಜಿಲ್ಲಾ ಮುಖಂಡ ಜಿ. ಹನುಮೇಶ್, ಜಿಲ್ಲಾಧ್ಯಕ್ಷೆ ಸರಸ್ವತಮ್ಮ, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀ, ಆಶಾ ಮುಖಂಡರಾದ ಮಂಜುಳಾ, ಸುಶೀಲಾ, ಸುಜಾತ, ಜಯಮ್ಮ,ಮಮತಾರೆಡ್ಡಿ, ಮತ್ತಿತರರು ಇದ್ದರು.