ಹಳಿಯಾಳ: ಜಾನುವಾರುಗಳಿಂದ ಎಲ್ಲ ಉಪಯೋಗ ಪಡೆದುಕೊಂಡು ಅವುಗಳಿಗೆ ವಯಸ್ಸಾಯಿತೆಂದು ಅವುಗಳನ್ನು ತಿರಸ್ಕರಿಸುವುದು ಅಮಾನವೀಯ ಕೃತ್ಯವಾಗಿದ್ದು, ಮನುಷ್ಯ ಇಷ್ಟೂ ಕೃತಘ್ನನಾಗಿರಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಭಾನುವಾರ ಸಂಜೆ ತಾಲೂಕಿನ ದುಸಗಿ ಗ್ರಾಮದಲ್ಲಿನ ಜಿಲ್ಲಾ ಗೋಶಾಲೆಯಲ್ಲಿ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರ ಶಾಸಕರ ನಿಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಪಾಲಕರಿಗೆ ವಯಸ್ಸಾಗಿದೆ ಎಂದು ಅವರನ್ನು ಬಿಡುತ್ತೇವೆಯೇ ಎಂದು ಪ್ರಶ್ನಿಸಿದರು. ಜಾನುವಾರುಗಳಿಗೆ ಮಾತನಾಡಲು ಬರುವುದಿಲ್ಲ. ಆದರೆ ನಮ್ಮ ಭಾಷೆಯನ್ನು ಅರಿಯುವ ಶಕ್ತಿ ಅವುಗಳಿಗಿದೆ. ಆದರೆ ಜಾನುವಾರುಗಳನ್ನು ಅರಿಯುವ ಶಕ್ತಿ ನಮಗಿಲ್ಲ. ಅದಕ್ಕಾಗಿ ಗೋವುಗಳನ್ನು, ಪ್ರಾಣಿಗಳನ್ನು ಪ್ರೀತಿಸಿ ಎಂದರು.
ತಾಲೂಕಿನಲ್ಲಿ ಆರಂಭಗೊಂಡಿರುವ ಗೋಶಾಲೆಯು ರಾಜ್ಯದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನನ್ನ ಕ್ಷೇತ್ರದಲ್ಲಿ ಗೋಶಾಲೆಯನ್ನು ಆರಂಭಿಸಬೇಕೆಂಬ ನನ್ನ ಇಚ್ಛೆಯಾಗಿತ್ತು. ಇಲ್ಲಿ 130ಕಕೂ ಹೆಚ್ಚು ಜಾನುವಾರುಗಳಿವೆ ಎಂದರು.ಸರ್ಕಾರ ಹಾಗೂ ನನ್ನ ವಿಆರ್‌ಡಿ ಟ್ರಸ್ಟ್ ಮೂಲಕ ಮತ್ತು ಉದ್ಯಮಿ ಸ್ನೇಹಿತರ ಸಹಕಾರದಿಂದ ಗೋಶಾಲೆಯನ್ನು ಮಾದರಿಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ತಾಲೂಕು ಪಶು ವೈದ್ಯಾಧಿಕಾರಿ ಡಾ .ಕೆ.ಎಂ. ನದಾಫ ಮಾತನಾಡಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ₹10 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಸಿಸಿ ರಸ್ತೆ ಮತ್ತು ಆವರಣ ಗೋಡೆಯನ್ನು ಮತ್ತು ತಂತಿಬೇಲಿಯನ್ನು ನಿರ್ಮಾಣ ಮಾಡಲಾಗುವುದೆಂದರು.ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಇಒ ಸತೀಶ್ ಆರ್., ಪಶು ಸಂಗೋಪನಾ ಇಲಾಖೆಯ ಜಿಲ್ಲಾ ನಿರ್ದೇಶಕ ಡಾ. ಮೋಹನ, ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ, ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಮದ್ನಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಸಂಜು ಮೊರೆ, ಗ್ರಾಪಂ ಸದಸ್ಯ ರಾಘವೇಂದ್ರ ಸಾಂಬ್ರಾಣಿಕರ, ಯುವ ಕಾಂಗ್ರೆಸ್ ರವಿ ತೋರಣಗಟ್ಟಿ ಇದ್ದರು.