ಲಕ್ಷ್ಮೇಶ್ವರ: ಹಿರಿಯರು ಸಮಾಜದ ಆಧಾರಸ್ತಂಭಗಳಿದ್ದಂತೆ. ಅವರಿಗಿರುವ ಜ್ಞಾನ, ಅನುಭವ ಯುವಕರಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ವಯಸ್ಸಾಗುತ್ತಿದ್ದಂತೆ ಹಿರಿಯರನ್ನು ಮಕ್ಕಳು ಕಡೆಗಣಿಸುತ್ತಿರುವುದು ವಿಷಾದನೀಯ ಎಂದು ಡಿವೈಎಸ್‌ಪಿ ಮುರ್ತುಜಾ ಖಾದ್ರಿ ತಿಳಿಸಿದರು.
ಕೆಲವು ಕಡೆ ಸಮಾಜ ಕಂಟಕರಿಂದ ಕಿರುಕುಳ, ಮತ್ತೆ ಕೆಲವು ಕಡೆ ಸ್ವತಃ ಕುಟುಂಬದವರಿಂದಲೇ ನಿರ್ಲಕ್ಷ್ಯ. ಇಂತಹ ಆತಂಕವನ್ನು ದೂರ ಮಾಡಲು ಮತ್ತು ಅವರಿಗೆ ಧೈರ್ಯ ತುಂಬಲು ಕರ್ನಾಟಕ ಪೊಲೀಸ್ ಇಲಾಖೆ ಆಸರೆ ಎಂಬ ವಿನೂತನ ಯೋಜನೆ ಜಾರಿಗೆ ತಂದಿದ್ದು, ಇದರ ಬಗ್ಗೆ ಹಿರಿಯ ನಾಗರಿಕರು ತಿಳಿದುಕೊಂಡು ಅದರ ಉಪಯೋಗ ಪಡೆದುಕೊಳ್ಳಬಹುದು ಎಂದರು.
ಆಸರೆ ಯೋಜನೆಯಡಿ ಪೋಲಿಸರು ಅಂತಹ ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುವರು. ತುರ್ತು ವೈದ್ಯಕೀಯ ಸೇವೆ, ಸರ್ಕಾರಿ ಸೇವೆ ಇತ್ಯಾದಿಗಳ ಬಗ್ಗೆ ಸಹಾಯ ಮಾಡುವರು. ಹಿರಿಯರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಅವರ ಅನುಭವದಿಂದ ಸಾಕಷ್ಟು ಸಾಧನೆಗಳನ್ನು ಮಾಡಬಹುದು. ಹಿರಿಯರ ಬಗ್ಗೆ ನಿರ್ಲಕ್ಷ್ಯ ತೋರುವ ಕುಟುಂಬ ಸದಸ್ಯರಿಗೆ ಪೊಲೀಸರು ತಿಳಿವಳಿಕೆ ನೀಡುವ ಕಾರ್ಯವನ್ನು ಸಹ ಮಾಡುತ್ತಾರೆ. ಅದಕ್ಕಾಗಿ ಹಿರಿಯರು ಯಾವುದೇ ಕಾರಣಕ್ಕೂ ಅಧೈರ್ಯ ಪಡುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ಇಲಾಖೆಯ ಆಸರೆ ಸದಾ ಇರುತ್ತದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ವಹಿಸಿದ್ದರು. ಸಿಪಿಐ ಬಿ.ವೈ. ನ್ಯಾಮಗೌಡ್ರ, ಚನ್ನಪ್ಪ ಕೋಲಕಾರ, ಚಂಬಣ್ಣ ಬಾಳಿಕಾಯಿ, ಐ.ಎಸ್. ಮಡಿವಾಳರ, ಎಸ್.ಸಿ. ಅಳಗವಾಡಿ, ಡಾ. ಪಿ.ಡಿ. ತೋಟದ, ದೇವಣ್ಣ ಬಳಿಗಾರ, ಕುಬೇರಪ್ಪ ಮಹಾಂತಶೆಟ್ಟರ, ಅಶೋಕ ಪಡ್ನೀಸ್, ಎಸ್.ಎಸ್. ಪವಾಡಶೆಟ್ಟರ, ಸೂಗಿರಪ್ಪ ವಾಲಿಶೆಟ್ಟೆರ, ಶಿವಣ್ಣ ಕುಮಸಿ, ತೋಟಪ್ಪ ಸೂರಣಗಿ, ನಿಂಗಪ್ಪ ಬನ್ನಿ, ನೀಲಪ್ಪ ಕರ್ಜೆಕಣ್ಣವರ ಇದ್ದರು.