ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣಿಭಾದಿತ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ತಾಲೂಕಿನ ಆಸ್ಪತ್ರೆಗಳಿಗೆ ಅಗತ್ಯವಾಗಿರುವಂತಹ ಕಟ್ಟಡ ನಿರ್ಮಾಣ ಚಿಕಿತ್ಸೆಗೆ ಅಗತ್ಯವಾದ ಸಲಕರಣೆಗಳನ್ನು ಖರೀದಿಸಲು ಈಗಾಗಲೇ ೧೬ ಕೋಟಿ ರು. ಅನುದಾನದಡಿಯಲ್ಲಿ ಕ್ರಿಯಾಯೋಜನೆ ರೂಪಿಸಿ ಮಂಜೂರಾತಿಗೆ ಕಳಿಸಲಾಗಿದೆ. ಇನ್ನು ಹೆಚ್ಚಿನ ಅವಶ್ಯಕತೆ ಇರುವಂತಹ ಆಂಬುಲೆನ್ಸ್ ಸೇವೆ. ಮೊಬೈಲ್ ತುರ್ತು ಚಿಕಿತ್ಸಾ ವಾಹನ ಗಳಿಗೆ ಕ್ರಿಯಾಯೋಜನೆ ರೂಪಿಸಿ ನೀಡಿದರೆ ಅವುಗಳನ್ನು ಮಂಜೂರು ಮಾಡಿಸಲಾಗುವುದು.
ಕಳೆದ ೧೫ ವರ್ಷಗಳ ಹಿಂದೆಯೇ ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ಸೇರುವಂತಹ ಕೆಬಿ ಕ್ರಾಸ್ ಬಳಿ ಸುಮಾರು ೫೦ ಎಕರೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಾಡಿದರೆ ಮೈಸೂರು. ಚಿತ್ರದುರ್ಗ ಹಾಗೂ ಶಿವಮೊಗ್ಗ ಬೆಂಗಳೂರು ಮಧ್ಯದ ಕೇಂದ್ರದಲ್ಲಿ ಈ ಆಸ್ಪತ್ರೆ ಉತ್ತಮ ಸೇವೆ ದೊರೆಯಬಹುದೆಂಬ ಯೋಚನೆಯಿಂದ ಕ್ರಿಯಾಯೋಜನೆ ರೂಪಿಸಿ ಕಳುಹಿಸಲಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಈಗಿನ ಗಣಿಭಾದಿತ ಪ್ರದೇಶಗಳಲ್ಲಿ ಇರುವಂತಹ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ..ದಿಲೀಪ್ ಮಾತನಾಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳು ಲಭ್ಯವಿದ್ದು ಹುಳಿಯಾರಿನಲ್ಲಿ ಹೆಚ್ಚು ಜನರು ಬರುವ ಕಾರಣ ಅಲ್ಲಿಗೆ ಇನ್ನು ಸಿಬ್ಬಂದಿಯನ್ನು ನಿಯೋಜಿಸುವಂತೆ ಹಾಗೂ ಚಿ.ನಾ.ಹಳ್ಳಿ ಪಟ್ಟಣದ ಆಸ್ಪತ್ರೆಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವ ಸಂಪರ್ಕ ಕಲ್ಪಿಸುವಂತೆ ತಿಳಿಸಿದ ಅವರು ತಾಲೂಕಿನಲ್ಲಿ ಆರೋಗ್ಯದ ಬಗ್ಗೆ ಸಂಕ್ರಾಮಿಕ ರೋಗಗಳನ್ನು ಹತೋಟಿಯಲ್ಲಿಡಲು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ನಟರಾಜ್ ಮಾತನಾಡಿ ರಾತ್ರಿ ವೇಳೆ ಆಸ್ಪತ್ರೆಯ ಸಿಬ್ಬಂದಿಗೆ ರಕ್ಷಣೆ ವ್ಯವಸ್ಥೆ ಹಾಗೂ ಈಗ ಔಷಧಿ ಖರೀದಿಗೆ ೧೦ಸಾವಿರವಿದ್ದು ಅದನ್ನು ೨೫ಸಾವಿರಕ್ಕೆ ಹೆಚ್ಚಿಸಿದರೆ ತುರ್ತು ಸಂದರ್ಭದಲ್ಲಿ ಹೆಚ್ಚಿನ ಔಷಧಿ, ಚುಚ್ಚುಮದ್ದುಗಳನ್ನು ಖರೀದಿಸಲು ಅನುಕೂಲವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ್ ಪ್ರಸಾದ್ , ಇಒ ಶಿವರಾಜಯ್ಯ, ಪುರಸಭಾ ಮುಖ್ಯಾಧಿಕಾರಿ ಮಂಜಮ್ಮ ಸೇರಿದಂತೆ ಹಿರಿಯ ವೈದ್ಯರುಗಳಾದ ಕುಮಾರಸ್ವಾಮಿ, ನಟರಾಜ್ ಮತ್ತಿತರರು ಇದ್ದರು.