ಎಚ್‌ಐವಿ ಸೋಂಕಿತರನ್ನು ಪ್ರೀತಿ, ವಿಶ್ವಾಸದಿಂದ ಕಾಣಿ: ಸುನೀಲ ತಳವಾರ

KannadaprabhaNewsNetwork | Published : Dec 5, 2024 12:32 AM

ಸಾರಾಂಶ

ಶಿಗ್ಗಾಂವಿ ಪಟ್ಟಣದ ಜೆಎಂಜೆ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಏಡ್ಸ್‌ ದಿನಾಚರಣೆ ನಡೆಯಿತು. ಕಾರ್ಯಕ್ರಮ ಪೂರ್ವದಲ್ಲಿ ನಡೆದ ಎಚ್‌ಐವಿ ಜಾಗೃತಿ ಜಾಥಾದಲ್ಲಿ ಜೆ.ಎಂ.ಜೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಶಿಗ್ಗಾಂವಿ: ಎಚ್‌ಐವಿ ಸೋಂಕಿತರನ್ನು ಪ್ರೀತಿ, ವಿಶ್ವಾಸದಿಂದ ಕಂಡಾಗ ಮಾತ್ರ ಅವರು ನಮ್ಮಂತೆ ಮುಖ್ಯವಾಹಿನಿಗೆ ಬರುತ್ತಾರೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸುನೀಲ ತಳವಾರ ಹೇಳಿದರು.

ಪಟ್ಟಣದ ಜೆಎಂಜೆ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಡ್ಸ್‌ ಸೋಂಕಿತರು ಎಲ್ಲರಂತೆ ಬದುಕಿ ಬಾಳಬೇಕು. ಅಂದಾಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ. ಕಾನೂನು ಬಗ್ಗೆ ಮಾಹಿತಿ ಪಡೆದುಕೊಂಡರೆ ಒಳ್ಳೆಯದು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಹಾಗೂ ಸರ್ಕಾರಿ ಆಸ್ಪತ್ರೆಯ ಬಗ್ಗೆ ಇರುವ ಕೀಳರಿಮೆಯನ್ನು ಇಂದಿನ ಯುವ ಸಮುದಾಯ ತೊಡೆದು ಹಾಕಬೇಕು. ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಿದರೆ ಅನಾರೋಗ್ಯದಿಂದ ದೂರ ಇರಬಹುದು ಎಂದು ಕಿವಿಮಾತು ಹೇಳಿದರು.

ತಜ್ಞ ವೈದ್ಯೆ ಡಾ. ರಾಜೇಶ್ವರಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿರುವ ಕಾರಣ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬೇಕು. ಎಚ್‌ಐವಿ ಸೋಂಕಿತರನ್ನು ತಾರತಮ್ಯದಿಂದ ನೋಡದೇ, ಪ್ರೀತಿ ವಿಶ್ವಾಸದಿಂದ ಕಾಣೋಣ ಎಂದರು.

ಎಆರ್‌ಟಿ ಹಿರಿಯ ಆಪ್ತ ಸಮಾಲೋಚಕ ಸುಧಾಕರ ದೈವಜ್ಞ ಮಾತನಾಡಿ, ಸೋಂಕಿತರಿಗೆ ಅನೇಕ ಸೌಲಭ್ಯಗಳು ಇದ್ದು, ಅದರ ಸದುಪಯೋಗ ಆಗಬೇಕು ಎಂದರು.

ಕಾರ್ಯಕ್ರಮ ಪೂರ್ವದಲ್ಲಿ ನಡೆದ ಎಚ್‌ಐವಿ ಜಾಗೃತಿ ಜಾಥಾದಲ್ಲಿ ಜೆ.ಎಂ.ಜೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಾಂಶುಪಾಲೆ ಸಿಸ್ಟರ್ ಅನಿಜಾರ್ಜ್‌ ಅಧ್ಯಕ್ಷತೆ ವಹಿಸಿದ್ದರು. ದಿವಾಣಿ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ, ನ್ಯಾಯವಾದಿ ಚೆನ್ನಮ್ಮ ಬಡ್ಡಿ, ಸುರೇಶ ಎಚ್., ಸರೋಜಾ ಹರಿಜನ, ಎಸ್.ಬಿ. ಕಟ್ಟಿಮನಿ, ರಾಮನಗೌಡ ಪಾಟೀಲ, ಹನುಮಂತ, ಗರೀಬಸಾಬ, ಇಂದಿರಾ, ಪ್ರೇಮಾ ಉಪಸ್ಥಿತರಿದ್ದರು.

ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿ ಶಮ್ಸತಬರೀಜ ಸ್ವಾಗತಿಸಿದರು. ಆಪ್ತ ಸಮಾಲೋಚಕಿ ರೇಣುಕಾ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.

Share this article