ವಿನಯ್ ಡೆತ್‌ನೋಟನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಿ: ಅಪ್ಪಚ್ಚು ರಂಜನ್ ಒತ್ತಾಯ

KannadaprabhaNewsNetwork | Published : Apr 5, 2025 12:46 AM

ಸಾರಾಂಶ

ವಿನಯ್‌ ಡೆತ್ ನೋಟನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸುವಂತೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿನಯ್‌ ಡೆತ್ ನೋಟನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸುವಂತೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರಿಗೆ ತಕ್ಕಂತೆ ವಿನಯವಾಗಿ ವರ್ತಿಸುತ್ತಿರುವವರು, ಇವರು ಒಂದು ಸಣ್ಣ ಕಪ್ಪು ಚುಕ್ಕಿ ಇಲ್ಲದೆ ತಮ್ಮ ಜೀವನ ಸಾಗಿಸುತ್ತಿದ್ದವರು. ಗೌರವಯುತ ಕುಟುಂಬದಲ್ಲಿ ಬಂದವರು. ಆದರೆ ಇವರು ವಾಟ್ಸಪ್ ಗ್ರೂಪ್‌ನ ಅಡ್ಮಿನ್ ಎಂಬ ಒಂದೇ ಕಾರಣಕ್ಕೆ, ಯಾರೋ ಕಿಡಿಗೇಡಿಗಳು ಮಾಡಿದ ಅವಹೇಳನ ಬರಹಕ್ಕೆ ಜನ ಪ್ರತಿನಿಧಿಗಳ ಒತ್ತಡದಿಂದ ಇವರ ಮೇಲೆ ಪೊಲೀಸ್ ಇಲಾಖೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗಿದೆ. ಬಳಿಕ ಇವರಿಗೆ ನೀಡಿದ ಕಿರುಕುಳದಿಂದ ವಿನಯ್ ಸೋಮಯ್ಯ ಅವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜನಪ್ರತಿನಿಧಿಗಳು ನಿಜವಾದ ಕಿಡಿಗೇಡಿಗಳ ವಿರುದ್ಧ ಕ್ರಮ ಕಾನೂನು ಕ್ರಮ ಕೈಗೊಳ್ಳಬೇಕೆ ವಿನಃ ಅಧಿಕಾರ ದುರುಪಯೋಗಪಡಿಸಿಕೊಂಡು ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ ಮೇಲೆ ದಬ್ಬಾಳಿಕೆ ಮಾಡುವುದು ಯಾವ ನ್ಯಾಯ? ಜನಪ್ರತಿನಿಧಿಗಳು ಜನರ ರಕ್ಷಣೆಗೆ ಇರಬೇಕು, ಕಾನೂನು ಇರುವುದು ಜನರ ರಕ್ಷಣೆಗೆ ಇದನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ವಿನಯ್ ಸೋಮಯ್ಯ ಅವರ ಡೆತ್ ನೋಟ್‌ನಲ್ಲಿ ಬರೆದಿರುವವರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಡೆತ್ ನೋಟನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬೇಕು ಎಂದೂ ರಂಜನ್ ಒತ್ತಾಯಿಸಿದ್ದಾರೆ.

----------------------------

ವಿನಯ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ: ತೆನ್ನಿರಾ ಮೈನಾ

ಮಡಿಕೇರಿ: ವಿನಯ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಮುಖಂಡ ತೆನ್ನಿರಾ ಮೈನಾ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು ಗ್ರೂಪಿನಲ್ಲಿ ಪೊನ್ನಣ್ಣ ವಿರುದ್ಧ ಅವಹೇಳನ ಪೋಸ್ಟ್ ಹಾಕಲಾಗಿತ್ತು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಪೊನ್ನಣ್ಣ ಅವರ ಫೋಟೋವನ್ನು ಶೌಚಾಲಯದಲ್ಲಿ ಇರಿಸಿರುವಂತೆ ಪೋಸ್ಟ್ ಹಾಕಲಾಗಿತ್ತು. ಇದರ ವಿರುದ್ಧ ಜಿಲ್ಲೆಯ ಹಲವು ಠಾಣೆಗಳಲ್ಲಿ ದೂರು ನೀಡಲಾಗಿತ್ತು. ನಾನೂ ಕೂಡ ಮಡಿಕೇರಿಯಲ್ಲಿ ದೂರು ನೀಡಿದ್ದೆ. ಹೀಗಾಗಿ ಮೂವರ ವಿರುದ್ಧ ಎಫ್ಐಆರ್ ಆಗಿತ್ತು. ನಂತರ ಎಫ್ಐಆರ್‌ಗೆ ಹೈಕೋರ್ಟ್‌ನಿಂದ ತಡೆ ನೀಡಲಾಗಿತ್ತು. ಆದಾದ ನಂತರ ಆ ಪ್ರಕರಣದಲ್ಲಿ ಯಾವುದೇ ರೀತಿ ಭಾಗಿಯಾಗಿಲ್ಲ. ಅಂದರೆ ನಾನಾಗಲಿ ಶಾಸಕರಾಗಲಿ ಹೇಗೆ ಕಿರುಕುಳ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

ವಿನಯ್ ಎಂಬಾತನ ಮುಖ ಪರಿಚಯ ಕೂಡ ನನಗೆ ಇಲ್ಲ. ಆತನನ್ನು ಪ್ರಕರಣದ ಮೊದಲು ಅದರ ನಂತರವೂ ನೋಡಿಲ್ಲ. ಆತನಿಗೆ ಕಿರುಕುಳ ನೀಡಿದವರು ಯಾರು ಪತ್ತೆ ಮಾಡಲಿ. ಪೊಲೀಸರು ಆತನಿಗೆ ಕಿರುಕುಳ ನೀಡಿದ್ರಾ? ಇಲ್ಲ ಬೇರೆ ಯಾರಾದರೂ ವ್ಯಕ್ತಿ ದೂರು ನೀಡಿದ್ರಾ? ಆತನಿಗೆ ಪ್ರತಾಪ್ ಸಿಂಹ, ಕೊಡಗಿನ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಮುಂತಾದವರು ಕಾನೂನು ಸಲಹೆ ನೀಡಿದ್ದಾರೆ. ಹೀಗಾಗಿ ಅವರನ್ನು ವಿಚಾರಣೆ ಮಾಡಲಿ. ಆತನೊಂದಿಗೆ ಸಂಭಾಷಣೆ ನಡೆಸಿರುವವರನ್ನು ವಿಚಾರಣೆ ಮಾಡಲಿ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

Share this article