ನವಲಗುಂದ: ತಾಲೂಕಿನೆಲ್ಲೆಡೆ ಗುರುವಾರ ಸಂಜೆ ಸಿಡಿಲು. ಗುಡುಗು ಗಾಳಿ ಸಹಿತ ಭಾರಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರಗಳು ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ.
ಗುಮ್ಮಾಗೋಳ, ಶಿರೂರು ಹಾಗೂ ತೆಲೆಮೊರಬ ಗ್ರಾಮಕ್ಕೆ ತಹಸೀಲ್ದಾರ್ ಸುಧೀರ್ ಸಾಹುಕಾರ್ ಭೇಟಿ ನೀಡಿ ಪರಿಶೀಲಿಸಿದರು. ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು ಯಾವುದೇ ಪ್ರಾಣ ಹಾನಿಯಾದ ಕುರಿತು ವರದಿಯಾಗಿಲ್ಲ.ಕುಂದಗೋಳದಲ್ಲಿ ಗುಡುಗು-ಸಿಡಿಲಿನೊಂದಿಗೆ ಮಳೆ
ಕುಂದಗೋಳ: ಪಟ್ಟಣ ಹಾಗೂ ತಾಲೂಕಿನ ಕೆಲ ಭಾಗಗಳಲ್ಲಿ ಗುಡುಗು- ಸಿಡಿಲಿನೊಂದಿಗೆ ಸುರಿದ ಮಳೆಯಿಂದ ಕೆಲವೆಡೆ ವಿದ್ಯುತ್ ಕಂಬ ಹಾಗೂ ಗಿಡ-ಮರಗಳು ಧರೆಗುರುಳಿ, ತೆಂಗಿನ ಗಿಡಕ್ಕೆ ಬೆಂಕಿ ಹತ್ತಿದ ಘಟನೆ ಪಟ್ಟಣದಲ್ಲಿ ಬುಧವಾರ ಜರುಗಿದೆ. ತಾಲೂಕಿನ ಬೆಟದೂರಿನಿಂದ ಇನಾಂಕೊಪ್ಪ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯದಲ್ಲಿನ ಕೆಲ ಮರಗಳು ಹಾಗೂ 7 ವಿದ್ಯುತ್ ಕಂಬಗಳು ಧರೆಗುರುಳಿ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಬಂದಾಗಿದೆ. ಪಟ್ಟಣದ ಹುಬ್ಬಳ್ಳಿ- ಲಕ್ಷ್ಮೇಶ್ವರ ರಸ್ತೆಗೆ ಹೊಂದಿಕೊಂಡಿರುವ ರಮೇಶ ಕುನ್ನೂರ ಹಿತ್ತಲಿನಲ್ಲಿನ ಎರಡು ತೆಂಗಿನ ಗಿಡಕ್ಕೆ ಸಿಡಿಲು ಬಡಿದು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಹೆಸ್ಕಾಂನವರು ಗ್ರಾಮಕ್ಕೆ ತೆರಳಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸುತ್ತಿದ್ದಾರೆ.