ಮಹೇಶ ಛಬ್ಬಿ
ಗದಗ ಗ್ರಾಮೀಣ ಭಾಗದ ವ್ಯಾಪ್ತಿಯ ಮುಳಗುಂದ ಭಾಗದಲ್ಲಿ ಪವನ ವಿದ್ಯುತ್ ಕಂಪನಿಯು ಫ್ಯಾನ್‌ಗಳನ್ನು ಅಳವಡಿಸಲು ಈ ಭಾಗದ ರೈತರ ಸಾವಿರಾರು ಎಕರೆ ಜಮೀನುಗಳನ್ನು ಖರೀದಿಸಿದ್ದು, ಮುಳಗುಂದ- ಗದಗ ರಸ್ತೆ ಪಕ್ಕದ ಕೆಲ ಜಮೀನುಗಳಲ್ಲಿ ಕಂಪನಿಗೆ ಸಂಬಂಧಿಸಿದ ವಿದ್ಯುತ್ ಕಂಬಗಳನ್ನು ಅಳವಡಿಸಲು ಅಡಚಣೆಯಾಗುತ್ತದೆ ಎನ್ನುವ ಕಾರಣದಿಂದ ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಪರವಾನಗಿ ಪಡೆಯದೇ, ಯಾವುದೇ ಮುಲಾಜಿಲ್ಲದೇ ಮುಳಗುಂದದಿಂದ ಗದಗ ತೆರಳುವ ರಸ್ತೆಯ ಪಕ್ಕದ ಬಲ ಬದಿಯಲ್ಲಿ 300- 500 ಮೀಟರ್ ಅಂತರದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಹತ್ತಾರು ಮರಗಳಿಗೆ ಕೊಡಲಿ ಪೆಟ್ಟು ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನೂರಾರು ವರ್ಷಗಳಿಂದ ರಸ್ತೆಯ ಸೌಂದರ್ಯ ಹೆಚ್ಚಿಸಿ, ದಣಿದವರಿಗೆ, ವಾಹನ ಸವಾರರಿಗೆ ನೆರಳು ನೀಡಿ, ಜೀವಸಂಕುಲಗಳಿಗೆ ಆಶ್ರಯ ನೀಡಿದ 45 ಮರಗಳ ರೆಂಬೆ ಕೊಂಬೆ ಕತ್ತರಿಸಲು ಹಾಗೂ 15 ಮರಗಳನ್ನು ಸಂಪೂರ್ಣ ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂಬ ಕಾರಣ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಇದ್ದಲ್ಲಿ ಮಾ. 13ರ ವರೆಗೆ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಒಂದು ವೇಳೆ ಸಾರ್ವಜನಿಕರಿಂದ ಆಕ್ಷೇಪಣೆ ಬಂದಲ್ಲಿ ಮರ ತೆರವುಗೊಳಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.ಮುಳಗುಂದ ವ್ಯಾಪ್ತಿಯ ರೈತರ ಹೊಲಗಳಲ್ಲಿ ಪವನ ವಿದ್ಯುತ್ ಕಂ. ಫ್ಯಾನ್‌ಗಳ ಅಳವಡಿಕೆ ಕೆಲಸ ಪ್ರಾರಂಭಿಸಿದೆ. ಅದಕ್ಕೆ ಸಂಬಂಧಿಸಿದ ಫ್ಯಾನ್ ರೆಕ್ಕೆಗಳು, ಇನ್ನಿತರ ಸಲಕರಣೆಗಳು ಬೃಹತ್ ವಾಹನಗಳಲ್ಲಿ ಗದಗದಿಂದ ಮುಳಗುಂದಕ್ಕೆ ಇದೇ ರಸ್ತೆ ಮಾರ್ಗದಲ್ಲಿಯೇ ಬರಬೇಕಿದೆ. ಈ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ ಎನ್ನುವ ಕಾರಣದಿಂದ ಪವನ ವಿದ್ಯುತ್ ಕಂ. ಒತ್ತಡಕ್ಕೆ ಮಣಿದು ಮರಗಳ ತೆರವಿಗೆ ಮುಂದಾಗಿದೆಯೇ ಎನ್ನುವ ಅನುಮಾನ ಈಗ ಸತ್ಯವೆನಿಸಿದೆ ಎನ್ನುತ್ತಾರೆ ಪರಿಸರಪ್ರೇಮಿಗಳು.
ಕಾನೂನು ಕ್ರಮ: ಈ ಬಗ್ಗೆ ಪರಿಶೀಲಿಸಿ, ರಸ್ತೆ ಪಕ್ಕದ ಮರಗಳ ರೆಂಬೆ- ಕೊಂಬೆಗಳನ್ನು ಕತ್ತರಿಸಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ಪಾಟೀಲ ತಿಳಿಸಿದರು.
ಮಾರಣಹೋಮ: ಕರ್ನಾಟಕ ಮರಗಳ ಸಂರಕ್ಷಣಾ ಅಧಿನಿಯಮ 1976ರ ಅನ್ವಯ ಗದಗ- ಮುಳಗುಂದ ರಸ್ತೆಯಲ್ಲಿನ ಮರಗಳನ್ನು ತೆರವುಗೊಳಿಸಲು ಹಾಗೂ ರೆಂಬೆ ಕೊಂಬೆಗಳನ್ನು ಕಡಿಯಲು ಆಕ್ಷೇಪಣೆ ಸಲ್ಲಿಸಿದರು. ಅಕ್ಷೇಪಣೆಗೆ ಉತ್ತರ ಕೊಡದೆ ರೆಂಬೆ ಕೊಂಬೆಗಳ ಮಾರಣಹೋಮ ನಡೆಯುತ್ತಿದ್ದರೂ ಜಿಲ್ಲೆಯ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಪರಿಸರ ಪ್ರೇಮಿ ಬಸವರಾಜ ರಾಮರೆಡ್ಡಿ ತಿಳಿಸಿದರು.