ರಾಮನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಬೆಳಗ್ಗೆ ಜಾಥಾ ನಡೆಸಿದರು.ನಗರದ ಜೂನಿಯರ್ ಕಾಲೇಜು ಮೈದಾನದಿಂದ ಮಹಾತ್ಮ ಗಾಂಧಿ ಭಾವಚಿತ್ರದೊಂದಿಗೆ ರಾಷ್ಟ್ರಧ್ವಜ ಹಿಡಿದು ಎಂ.ಜಿ.ರಸ್ತೆ ಮುಖಾಂತರ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಕಾಲ್ನಡಿಗೆ ಜಾಥಾ ಆಗಮಿಸಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಂಬೇಡರ್ ಭವನದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಮಹಾತ್ಮ ಗಾಂಧೀಜಿ ಸರಳತೆಯಲ್ಲಿ ಏಕತೆಯನ್ನು ಕಂಡ ಮಹಾನ್ ಚೇತನವಾಗಿದ್ದಾರೆ. ಬ್ರಿಟೀಷರಿಂದ ಭಾರತ ದೇಶಕ್ಕೆ ಶಾಂತಿ, ಅಹಿಂಸಾ ಮಾರ್ಗವಾಗಿ ಸ್ವಾತಂತ್ರ‍್ಯ ತಂದು ಕೊಟ್ಟರು. ಇವರ ಜೊತೆ ಅಪಾರ ದೇಶ ಪ್ರೇಮಿಗಳು ಕೈ ಜೋಡಿಸಿದರು ಎಂದರು.ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿವಹಿಸಿಕೊಂಡು ಯಶಸ್ವಿಯಾಗಿ ಹಲವು ಮಹತ್ವದ ವಿಷಯಗಳ ಬಗ್ಗೆ ತೀರ್ಮಾನ ಕೈಗೊಂಡರು. ಆ ಅಧಿವೇಶನಕ್ಕೆ 100 ವರ್ಷ ಸಂದಿದ್ದು, ಆ ನೆನಪಿನಲ್ಲಿ ಗಾಂಧೀಜಿ ಸ್ಮರಿಸುತ್ತಾ ಅವರ ಸವಿನೆನಪಿನಲ್ಲಿ ಇಡೀ ವರ್ಷ ಗಾಂಧಿ ಭಾರತದ ಹೆಸರಿನಲ್ಲಿ ಅವರ ಆಚಾರ-ವಿಚಾರಧಾರೆಗಳನ್ನು ಗ್ರಾಪಂ ಮಟ್ಟದಲ್ಲಿ ವಿವಿಧ ಶಾಲೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯರ ಸೇವೆ ಗುರುತಿಸುವುದು, ಶಾಲೆಗೆ ಭೂ ದಾನ ನೀಡಿರುವ ದಾನಿಗಳನ್ನು ಗೌರವಿಸುವ ಹಲವು ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಹೆಚ್.ರಾಜು, ಹಾರೋಹಳ್ಳಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎನ್.ಅಶೋಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜು, ಬಮೂಲ್ ನಿರ್ದೇಶಕ ಪಿ.ನಾಗರಾಜು, ಹರೀಶ್ ಕುಮಾರ್, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಭಾಗವಹಿಸಿದ್ದರು.