ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಮಂಡ್ಯದ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ), ಸಹಯೋಗದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದ್ದ ಶಿಬಿರವು ಮಂಗಳವಾರ ಸಂಪನ್ನಗೊಂಡಿತು. ಕಲಾವಿದರು ಈ ಅವಧಿಯಲ್ಲಿ 30 ಶಿಲ್ಪಗಳಿಗೆ ಜೀವ ತುಂಬಿದರು.
ಶಿಲ್ಪ ಕಲಾವಿದರನ್ನು ಗೌರವಿಸಿದ ಬಳಿಕ ಮಾತನಾಡಿದ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ‘ಶಿಲ್ಪಗಳಿಗೆ ಭಾವ ಮತ್ತು ಜೀವವನ್ನು ತುಂಬಿರುವ ಕಲಾವಿದರ ಕಾರ್ಯ ಸ್ತುತ್ಯಾರ್ಹ. ತನ್ಮಯತೆ, ಏಕಾಗ್ರತೆ, ಕುಶಲತೆ ಮತ್ತು ಶಾಂತ ಮನಸ್ಥಿತಿಯಿಂದ ಕೆಲಸ ಮಾಡಿದ್ದರಿಂದಲೇ ಶಿಲ್ಪಗಳಲ್ಲಿ ಜೀವಂತಿಕೆ ಇದೆ. ಈ ಸ್ಥಳಕ್ಕೆ ಜೀವಕಳೆ ಬಂದಿದೆ. ಶಿಲ್ಪಗಳಂತೆಯೇ ಕಲಾವಿದರ ಹೆಸರು ಕೂಡ ನೂರಾರು ಕಾಲ ಉಳಿಯಲಿದೆ ಎಂದು ಶ್ಲಾಘಿಸಿದರು.ನಿತ್ಯವೂ ಪ್ರಾತಃ ಸ್ಮರಣೀಯರೂ ಆದ ಗಾಂಧೀಜಿ ಅವರ ಜೀವನ ಸಂದೇಶ ಸಾರುವ ‘ಗಾಂಧಿ ಗ್ರಾಮ’ದ ನಿರ್ಮಾಣಕ್ಕಾಗಿ ಜಿ.ಮಾದೇಗೌಡರು ಸಾಕಷ್ಟು ಶ್ರಮಿಸಿದ್ದರು. ಗೌಡರು ಯೋಜಿಸಿದ್ದಂತೆಯೇ ‘ಗಾಂಧಿ ಗ್ರಾಮ’ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ‘ದುಡಿಮೆಯೇ ದೇವರು’ ಎನ್ನುವಂತಹದ್ದು ಸೇರಿದಂತೆ ಎಲ್ಲಾ ಆಯಾಮಗಳನ್ನು ಪೂರೈಸುವಂತೆ ಮಾದರಿಯಾಗಿ, ಪವಿತ್ರ ತಾಣವಾಗಿ ರೂಪುಗೊಳ್ಳಲಿ ಎಂದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರೊ.ಜಿ.ಬಿ.ಶಿವರಾಜು ಅವರು, ‘ಇಂದಿನ ಹಲವಾರು ಬಿಕ್ಕಟ್ಟುಗಳು, ವಿಷಮ ಪರಿಸ್ಥಿತಿಯಲ್ಲಿ ಮಧ್ಯೆ ಬದುಕುತ್ತಿರುವ ನಾವು ಗಾಂಧೀಜಿ ಅವರ ಜೀವನ ಸಂದೇಶವನ್ನು ಅನುಸರಿಸಬೇಕಿದೆ. ಎಲ್ಲರ ಮನಮನಗಳಿಗೆ ಮನೆಮನೆಗಳಿಗೆ ಬಾಪು ಸಂದೇಶವನ್ನು ತಲುಪಿಸಬೇಕಿದೆ ಎಂದರು.
ಶಿಬಿರದ ನಿರ್ದೇಶಕ ಕೆ.ನಾರಾಯಣರಾವ್ ಮತ್ತು ಶಿಬಿರದ ಸಂಚಾಲಕ ವೈ.ಕುಮಾರ್ ಹಾಜರಿದ್ದರು.