ಕನ್ನಡಪ್ರಭ ವಾರ್ತೆ ಹಾಸನ
ಕಾರ್ಯಕ್ರಮದ ಸಭಾಂಗಣ ಜನರಿಂದ ಕಿಕ್ಕಿರಿದು ತುಂಬಿದ್ದು, ಎಸ್. ಜಾನಕಿ ಅವರ ಅಪಾರ ಜನಪ್ರಿಯತೆಗೆ ಸಾಕ್ಷಿಯಾಯಿತು.ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ ಅವರು ಎಸ್. ಜಾನಕಿ ಅವರ ಸಂಗೀತ ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿ, ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಗೀತಾಸಕ್ತರು, ಸಾಹಿತ್ಯಾಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ನಾದದೇವಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜಿಲ್ಲೆಯ ಹೆಸರಾಂತ ಗಾಯಕ- ಗಾಯಕಿಯರು ಎಸ್. ಜಾನಕಿ ಅವರು ಹಾಡಿದ ಕನ್ನಡದ ಸದಾಬಹಾರ ಗೀತೆಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು. ಪ್ರತಿಯೊಂದು ಗೀತೆಯೂ ಸಭಿಕರನ್ನು ಭಾವಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು.
ಯಶಸ್ಸಿಗೆ ಸಹಕರಿಸಿದ ಗಾಯಕ-ಗಾಯಕಿಯರು, ವಾದ್ಯಗೋಷ್ಠಿ ಕಲಾವಿದರು, ತಾಂತ್ರಿಕ ಸಿಬ್ಬಂದಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಸಾವಿರಾರು ಸಂಗೀತಾಭಿಮಾನಿಗಳಿಗೆ ಪರಿಷತ್ತಿನ ಪದಾಧಿಕಾರಿ ಸತೀಶ್ ಪಿಳ್ಳೇನಹಳ್ಳಿ ಕೃತಜ್ಞತೆ ಸಲ್ಲಿಸಿದರು. ಈ ಸ್ಮರಣಾಂಜಲಿ ಕಾರ್ಯಕ್ರಮವು ಕೇವಲ ಶ್ರದ್ಧಾಂಜಲಿಗೆ ಸೀಮಿತವಾಗದೆ, ಕನ್ನಡ ಸಂಗೀತ ಪರಂಪರೆಯ ಶ್ರೇಷ್ಠ ಗಾಯನಕ್ಕೆ ಸಲ್ಲಿಸಿದ ಅಪೂರ್ವ ಗೌರವವಾಗಿ ರೂಪುಗೊಂಡಿತು. ಎಸ್. ಜಾನಕಿ ಅವರ ಅಮರ ಸ್ವರಸಂಪತ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಾರ್ಥಕ ಪ್ರಯತ್ನವಾಗಿ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಸ್ವರ ಉಳಿದಿದೆ. ನೆನಪು ಚಿರಂತನ ಎಂಬ ಭಾವನೆಯೊಂದಿಗೆ ಭಾವುಕರಾಗಿ ನಿರ್ಗಮಿಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಹಂಪನಹಳ್ಳಿ ತಿಮ್ಮೇಗೌಡ, ಎನ್.ಎಲ್. ಚನ್ನೇಗೌಡ, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಜೆ.ಪಿ. ಶೇಖರ್, ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಬಾಳ್ಳುಗೋಪಾಲ್, ಜಿಲ್ಲಾ ಪತ್ರಕರ್ತರ ಸಂಘದ