ಕನ್ನಡಪ್ರಭ ವಾರ್ತೆ ಹೊಸಪೇಟೆ
ಕರ್ತವ್ಯನಿರತ ಪೊಲೀಸ್ ಹುತಾತ್ಮರ ಸೇವೆ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ವಿಜಯನಗರ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಡಿಎಆರ್ ಹೊಸ ಪರೇಡ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು, ಪೊಲೀಸ್ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯ ಅನುಪಸ್ಥಿತಿಯಲ್ಲಿ ಕಾನೂನು ಪರಿಪಾಲನೆ ಕಷ್ಟವಾಗುತ್ತದೆ. ಪೊಲೀಸ್ ಅಧಿಕಾರಿಯಿಂದ ಪೇದೆ ವರೆಗಿನ ಸಮವಸ್ತ್ರಕ್ಕೆ ಗೌರವ, ರಕ್ಷಣೆಯಿದೆ. ಈ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ. ನಾವು ಸುರಕ್ಷಿತವಾಗಿದ್ದೇವೆ ಎಂಬುವುದಕ್ಕೆ ಪೊಲೀಸ್ ಇಲಾಖೆಯೇ ಪ್ರಮುಖ ಕಾರಣ. ಇಂತಹ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ವೀರಮರಣ ಹೊಂದಿದ ಪೊಲೀಸರಿಗೆ ಇಲಾಖಾ ಹಂತದಲ್ಲಿ ಹಾಗೂ ಸಾರ್ವಜನಿಕ ವಲಯದಿಂದ ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇವೆ. ಆದರೆ, ಆ ಸಾವಿಗೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಹಬ್ಬಗಳ ಆಚರಣೆ ಸಂದರ್ಭದಲ್ಲಿಯೂ ಪೊಲೀಸರು ನಮ್ಮೆಲ್ಲರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಪೊಲೀಸರು ಹಗಲಿರುಳು ಕೆಲಸ ಮಾಡಿದ್ದಾರೆ. ಎಲ್ಲ ಪೊಲೀಸರು ಒತ್ತಡರಹಿತವಾಗಿ ಕರ್ತವ್ಯ ನಿರ್ವಹಿಸಿ. ಆರೋಗ್ಯ ಕಾಪಾಡಿಕೊಳ್ಳಿ. ಇದರೊಂದಿಗೆ ಕುಟುಂಬಕ್ಕೂ ಹೆಚ್ಚಿನ ಸಮಯ ಕೊಡಿ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕಾನೂನು ಪಾಲನೆಗಾಗಿ ತಾವು ಸಕ್ರಿಯವಾಗಿ ಪಾಲ್ಗೊಂಡು ಒಳ್ಳೆಯ ಕೆಲಸ ಮಾಡಬೇಕು. ಪೊಲೀಸ್ ಹುತಾತ್ಮರ ಸ್ಮಾರಕ ಅತ್ಯಂತ ಸುಂದರವಾಗಿ ನಿರ್ಮಾಣ ಮಾಡಲಾಗಿದೆ ಎಂದರು.ಜಿಪಂ ಸಿಇಒ ಸದಾಶಿವಪ್ರಭು ಬಿ., ಎಸ್ಪಿ ಬಿ.ಎಲ್. ಶ್ರೀಹರಿಬಾಬು ಸೇರಿದಂತೆ ಡಿವೈಎಸ್ಪಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.