ಹೋರಾಟಗಾರ ರಫಾಯಲ್‌ರಾಜುಗೆ ಶ್ರದ್ಧಾಂಜಲಿ

KannadaprabhaNewsNetwork |  
Published : Sep 26, 2024, 11:46 AM IST
BM SRI | Kannada Prabha

ಸಾರಾಂಶ

ಕರ್ನಾಟಕ ವಿಕಾಶರಂಗ ನಗರದ ಬಿಎಂಶ್ರೀ ಪ್ರತಿಷ್ಠಾನದಲ್ಲಿ ದಿ.ರಫಾಯಲ್‌ರಾಜ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಅವಿರತವಾಗಿ ಹೋರಾಟ ಮಾಡಿ ಯಶಸ್ಸು ಕಂಡ ರಫಾಯಲ್‌ರಾಜ ಅವರು ಕನ್ನಡ ಅಪ್ರತಿಮ ಹೋರಾಟಗಾರ ಎಂದು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ। ಭೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.

ಬುಧವಾರ ಕರ್ನಾಟಕ ವಿಕಾಶರಂಗ ನಗರದ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ದಿ.ರಫಾಯಲ್‌ರಾಜ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ನಾಯಕನಾಗುವ ಬದಲು ಕನ್ನಡ ಕಾರ್ಯಕರ್ತನಾಗಿ ದುಡಿದವರು ರಫಾಯಲ್‌ರಾಜ. ಚರ್ಚಿನಲ್ಲಿರುವ ಒಳಶತ್ರುಗಳ ಉಪಟಳಕ್ಕೆ ಹೆದರದೆ ಹೋರಾಡಿದರು. ಪೊಲೀಸ್‌ ಕೇಸ್‌, ಬಂಧನ, ಕೊಲೆ ಆರೋಪಗಳೆಲ್ಲವನ್ನೂ ಸಮರ್ಥವಾಗಿ ಎದುರಿಸಿದರು. ಕನ್ನಡಿಗರು ಮತ್ತು ಕರ್ನಾಟಕದ ಹಿತರಕ್ಷಣೆಗಾಗಿ ನಡೆದ ಎಲ್ಲ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅವರ ಕನ್ನಡ ಪ್ರೇಮ ಯುವಕರಿಗೆ ಮಾರ್ಗದರ್ಶನೀಯ ಎಂದರು.

ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ್‌, ರಫಾಯಲ್‌ರಾಜ್ ಕೇವಲ ಕ್ರೈಸ್ತ ಚಳವಳಿಗೆ ಮೀಸಲಾಗಿರಲಿಲ್ಲ. ಕನ್ನಡ ನಾಡಿನ ಸಮಗ್ರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂದು ಹೇಳಿದರು.

ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಕನ್ನಡಿಗ ಗಟ್ಟಿಯಾಗದ ಹೊರತು ಕನ್ನಡ ಗಟ್ಟಿಯಾಗುವುದಿಲ್ಲ. ಆದರಿಂದ ಕನ್ನಡ ಹೋರಾಟಗಾರರ ಕ್ಷೇಮವು ಮುಖ್ಯವಾಗಿದ್ದು, ಕನ್ನಡ ಹೋರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಸ್ಥಾಪನೆ ಆಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರರಾದ ವ.ಚ.ಚನ್ನೇಗೌಡ, ಪಾಲನೇತ್ರ, ಶ್ರ.ದೇ.ಪಾರ್ಶ್ವನಾಥ್, ಡಾ। ಸಂತೋಷ ಹಾನಗಲ್ಲ, ಗುರುದೇವ ನಾರಾಯಣಕುಮಾರ್, ಗೋವಿಂದಹಳ್ಳಿ ಕೃಷ್ಣೇಗೌಡ, ಕುವೆಂಪು ಪ್ರಕಾಶ್, ಕಾಣಿಕ್ಯಮೇರಿ ರಫಾಯಲ್‌ರಾಜ್, ಬಿ.ಎಂ.ಗಂಗಣ್ಣ ಹಾಗೂ ಹುಸೇನ್ ಪಾಲ್ಗೊಂಡಿದ್ದರು.

ಕನ್ನಡ ಕ್ರೈಸ್ತರ ಹೋರಾಟ ಇತಿಹಾಸ ಕೃತಿ ಪ್ರಕಟ

ಫಾದರ್‌ ಬರ್ತಲೋಮಿಯಾ ಮಾತನಾಡಿ, ರಫಾಯಲ್‌ರಾಜ ಕನ್ನಡ ಸಂಘಟನೆಗಳು ಹಾಗೂ ಕ್ರೈಸ್ತ ಸಂಘಟನೆಗಳ ನಡುವೆ ಕೊಂಡಿಯಂತಿದ್ದರು. ಈಗ ಆ ಕೊಂಡಿ ತುಂಡಾಗಿದೆ. ಮತ್ತೆ ಅದನ್ನು ಬೆಸೆಯುವ ಕೆಲಸ ಆಗಬೇಕಿದೆ. ಶೀಘ್ರದಲ್ಲೇ ‘ಕನ್ನಡ ಕ್ರೈಸ್ತರ ಹೋರಾಟದ ಇತಿಹಾಸ’ ಕುರಿತ ಕೃತಿಯನ್ನು ಶೀಘ್ರದಲ್ಲೇ ಪ್ರಕಟಿಸಿ ರಫಾಯಲ್ ರಾಜ್ ಅವರಿಗೆ ಅರ್ಪಿಸಲಾಗುವುದು ಎಂದು ತಿಳಿಸಿದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?