ಸೇವೆಗೆ ಅವಕಾಶ ಕಲ್ಪಿಸಿಕೊಟ್ಟ ಜನತೆಗೆ ಚಿರಋುಣಿ: ಸಂಸದ ಗೋವಿಂದ ಕಾರಜೋಳ

KannadaprabhaNewsNetwork | Published : Jan 26, 2025 1:35 AM

ಸಾರಾಂಶ

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬವನ್ನು ಸರಳ, ಸಂಕ್ಷಿಪ್ತವಾಗಿ ಆಚರಿಸಿಕೊಳ್ಳುತ್ತಾರೆ. ಹೀಗಾಗಿ ಪ್ರಧಾನಿ ಮೋದಿ ಅವರು ನಮಗೆಲ್ಲರಿಗೂ ಆದರ್ಶಗಳಾಗಬೇಕು

ಕನ್ನಡಪ್ರಭ ವಾರ್ತೆ ಮುಧೋಳ

ನಾನು ಜನ್ಮದಿನ ಆಚರಿಸಕೊಳ್ಳಬಾರದು ಎಂದು ನಿರ್ಧರಿಸಿದ್ದೆ, ಆದರೆ ನನ್ನ ಅಭಿಮಾನಿಗಳು, ಕಾರ್ಯಕರ್ತರು ಸರಳ, ಸಂಕ್ಷಿಪ್ತವಾಗಿ ಆಚರಿಸೋತ್ತೇವೆ ಎಂದು ಹೇಳಿ, ನನ್ನ ಮೇಲಿನ ಅಪಾರ ಅಭಿಮಾನ ಮತ್ತು ಪ್ರೀತಿಯಿಂದ ಇಂದು 75ನೇ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ನಾನು ಅವರಿಗೆಲ್ಲರಿಗೂ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.

ಶನಿವಾರ ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಗ್ರಾಮೀಣ ಮಂಡಳ ಮತ್ತು ನಗರ ಮಂಡಳ ಹಾಗೂ ಅಭಿಮಾನಿಗಳು ಆಯೋಜಿಸಿದ್ದ 75ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬವನ್ನು ಸರಳ, ಸಂಕ್ಷಿಪ್ತವಾಗಿ ಆಚರಿಸಿಕೊಳ್ಳುತ್ತಾರೆ. ಹೀಗಾಗಿ ಪ್ರಧಾನಿ ಮೋದಿ ಅವರು ನಮಗೆಲ್ಲರಿಗೂ ಆದರ್ಶಗಳಾಗಬೇಕು ಎಂದು ತಿಳಿಸಿದರು.

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನ್ನನ್ನು ಮುಧೋಳ ಮತಕ್ಷೇತ್ರದ ಜನತೆಯು ನನಗೆ ಆಶೀರ್ವಾದ ಮಾಡಿ ಶಾಸಕ, ಸಚಿವ, ಉಪ ಮುಖ್ಯಮಂತ್ರಿಯನ್ನಾಗಿ ಮಾಡಿ ಸಮಾಜ ಸೇವೆ ಮತ್ತು ಕ್ಷೇತ್ರದ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಅವರೆಲ್ಲರಿಗೂ ಚಿರಋಣಿಯಾಗಿರುತ್ತೇನೆ ಎಂದರು.

ನಾನು ವಿವಿಧ ಇಲಾಖೆಗಳ ಸಚಿವನಾಗಿ ತಾಲೂಕಿನಲ್ಲಿ ಕುಡಿಯುವ ನೀರು, ಗುಣಮಟ್ಟ ರಸ್ತೆ ನಿರ್ಮಾಣ, ವಿದ್ಯುತ್ ಸ್ಟೇಷನ್, ವಸತಿ ಶಾಲೆ, ಸರ್ಕಾರಿ ಶಾಲಾ-ಕಾಲೇಜು, ಬ್ರಿಜ್ ಕಂ ಬ್ಯಾರೇಜ್, ಜಾಗರಿ ಪಾರ್ಕ್‌, ಸೇತುವೆ, ಸಮುದಾಯ ಭವನ, ಏತ ನೀರಾವರಿ ಯೋಜನೆ, ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿ, ವಸತಿ, ಬೈಪಾಸ್ ರಸ್ತೆ, ಆಸ್ಪತ್ರೆ, ಮಿನಿ ವಿಧಾನಸೌಧ, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿಕೊಂಡು ಚಿತ್ರದುರ್ಗದ ಜನರು ನನ್ನ ಮುಖವನ್ನು ನೋಡದೆ ನನಗೆ ಮತ ಹಾಕುವುದರ ಮೂಲಕ ಪ್ರಥಮ ಭಾರಿಗೆ ನನ್ನನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಕಾರಣ ಇಷ್ಟೇ ನಾವು ಮಾಡಿರುವ ಕೆಲಸ ಯಾವತ್ತೂ ಶಾಶ್ವತವಾಗಿರುತ್ತದೆ ಎಂಬುದು ಯಾವತ್ತೂ ಮರೆಯಬಾರದು. ನಾವು ಮಾಡಿರುವ ಅಭಿವೃದ್ಧಿ ಕೆಲಸಗಳು ನಮಗೆ ಶ್ರೀರಕ್ಷೆ ಆಗಲಿವೆ ಎಂದು ಹೇಳಿದರು.

ತಾಲೂಕಿನಲ್ಲಿ ನೀರಾವರಿ ಸೌಲಭ್ಯ ಮಾಡಿರುವುದರಿಂದ ರೈತರು ಪ್ರತಿವರ್ಷ 5ಲಕ್ಷ ಟನ್ ಕಬ್ಬು ಬೆಳೆಯುತ್ತಿದ್ದರು, ಈಗ 1ಕೋಟಿ ಟನ್ ಕಬ್ಬು ಬೆಳೆಯುತ್ತಿದ್ದಾರೆ. ಇದರಿಂದ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರತಿವರ್ಷ ₹25 ಸಾವಿರ ಕೋಟಿ ವ್ಯವಹಾರ ನಡೆಯುತ್ತಿದೆ. ಹೀಗಾಗಿ ಮುಧೋಳ ತಾಲೂಕು ಶ್ರೀಮಂತರ ತಾಲೂಕು ಎನಿಸಕೊಂಡಿದೆ ಎಂದರು.

ನನ್ನ 75ನೇ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಗಣಪತಿ ದೇವಸ್ಥಾನ, ದಾನಮ್ಮದೇವಿಗೆ ವಿಶೇಷ ಪೂಜೆ, ಗೋಶಾಲೆಯ ಗೋವುಗಳಿಗೆ ಪೂಜೆ, ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ರಕ್ತದಾನ ಶಿಬಿರ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಬ್ಯಾಗ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿರುವುದಕ್ಕೆ ನಾನು ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಗೋವಿಂದ ಕಾರಜೋಳ ರವರ ಪತ್ನಿ ಶಾಂತಾದೇವಿ, ಪುತ್ರ ಅರುಣ ಹಾಗೂ ಕುಟುಂಬದವರು, ಬಿಜೆಪಿ ಮುಖಂಡರಾದ ಕೆ.ಆರ್.ಮಾಚಪ್ಪನವರ, ಹನಮಂತ ತುಳಸಿಗೇರಿ, ಕಲ್ಲಪ್ಪಣ್ಣ ಸಬರದ, ಲಕ್ಷ್ಮಣ ಚಿನ್ನಣ್ಣವರ, ಸದಾಶಿವ ತೇಲಿ, ಶ್ರೀಕಾಂತ ಗುಜ್ಜನ್ನವರ, ಡಾ.ರವಿ ನಂದಗಾಂವ, ಸಂಗಣ್ಣ ಕಾತರಕಿ, ಬಸವರಾಜ ಮಳಲಿ, ಕಲ್ಮೇಶ ಗೋಸಾರ, ನಾಗಪ್ಪ ಅಂಬಿ, ರಾಜು ಯಡಹಳ್ಳಿ, ಶ್ರೀಶೈಲ ಚಿನ್ನಣ್ಣವರ, ಸದಾಶಿವ ಇಟಕನ್ನವರ, ವಿವೇಕಾನಂದ ಪಾಟೀಲ, ಲಕ್ಷ್ಮಣ ರಾಘಣ್ಣವರ, ರವಿ ಮಾಚಪ್ಪನವರ, ಮುಕುಂದ ನಿಂಬಾಳಕರ, ಎಮ್.ಎಸ್.ಹಂಚಿನಾಳ, ರಾಘು ಶಿಂಧೆ, ಹೊಳಬಸು ಬಟಕುರ್ಕಿ, ರಾಜಶೇಖರ ಭರಮೋಜಿ, ವೆಂಕಪ್ಪ ಲೆಂಕಣ್ಣವರ, ಚಿದಾನಂದ ಪಂಚಕಟ್ಟಿಮಠ, ವೆಂಕಪ್ಪ ಹುಣಶಿಕಟ್ಟಿ, ಗಿರೀಶ ಲೆಂಕಣ್ಣವರ ಹಾಗೂ ಚಿತ್ರದುರ್ಗ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು ಗೋವಿಂದ ಕಾರಜೋಳ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದರು.

ಗವಿಮಠ-ವಿರಕ್ತಮಠದ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸಂಗನಗೌಡ ಕಾತರಕಿ ಸ್ವಾಗತಿಸಿ, ಶೈಲಜಾ ಕೊಟ್ರಿ ನಿರೂಪಿಸಿದರು.

-----

ಕೋಟ್‌..

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬವನ್ನು ಸರಳ, ಸಂಕ್ಷಿಪ್ತವಾಗಿ ಆಚರಿಸಿಕೊಳ್ಳುತ್ತಾರೆ. ಹೀಗಾಗಿ ಪ್ರಧಾನಿ ಮೋದಿ ಅವರು ನಮಗೆಲ್ಲರಿಗೂ ಆದರ್ಶಗಳಾಗಬೇಕು.

- ಗೋವಿಂದ ಕಾರಜೋಳ, ಚಿತ್ರದುರ್ಗದ ಸಂಸದ

Share this article