19 ಚಿನ್ನದ ಪದಕ ಗಳಿಸಿದ ಸಾಧಕಿ ವಿ.ತೇಜಸ್ವಿನಿಗೆ ಸನ್ಮಾನ

KannadaprabhaNewsNetwork | Published : Mar 29, 2024 12:54 AM

ಸಾರಾಂಶ

ತೇಜಸ್ವಿನಿ ಸಾಧನೆಯನ್ನು ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಮುಕ್ತಕಂಠದಿಂದ ಪ್ರಶಂಸಿಸಿ ಮಾತನಾಡಿದರು. ಶಾಲೆಯ ಹಳೆಯ ವಿದ್ಯಾರ್ಥಿ ಸಿಂಗಪೂರ್ ಶ್ರೀನಿವಾಸ್ ಮಾತನಾಡಿ, ಶೈಕ್ಷಣಿಕವಾಗಿ ಕನ್ನಡ ಭಾಷೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಮಹತ್ವದ ಸಾಧನೆ ಮಾಡಿರುವುದು ನಾವೆಲ್ಲರೂ ಹೆಮ್ಮೆಪಡುವ ವಿಚಾರ, ತೇಜಸ್ವಿನಿಸಾಧನೆ ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಪ್ರೇರಣೆ ನೀಡಿದೆ ಎಂದರು.

ಕನ್ನಡಪ್ರಭ ವಾರ್ತೆ ತಲಕಾಡು

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಐಚ್ಛಿಕ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಒಟ್ಟು19 ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ ವಿ. ತೇಜಸ್ವಿನಿ ಎಂಬ ಮೇದಿನಿ ಗ್ರಾಮದ ವಿದ್ಯಾರ್ಥಿನಿಯನ್ನು ತಲಕಾಡಿನ ಗೂಳಬೋವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ತೇಜಸ್ವಿನಿ ಸಾಧನೆಯನ್ನು ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಮುಕ್ತಕಂಠದಿಂದ ಪ್ರಶಂಸಿಸಿ ಮಾತನಾಡಿದರು.

ಶಾಲೆಯ ಹಳೆಯ ವಿದ್ಯಾರ್ಥಿ ಸಿಂಗಪೂರ್ ಶ್ರೀನಿವಾಸ್ ಮಾತನಾಡಿ, ಶೈಕ್ಷಣಿಕವಾಗಿ ಕನ್ನಡ ಭಾಷೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಮಹತ್ವದ ಸಾಧನೆ ಮಾಡಿರುವುದು ನಾವೆಲ್ಲರೂ ಹೆಮ್ಮೆಪಡುವ ವಿಚಾರ, ತೇಜಸ್ವಿನಿಸಾಧನೆ ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಪ್ರೇರಣೆ ನೀಡಿದೆ ಎಂದು ಶ್ಲಾಘಿಸಿದರು.

ದಾನಿ ಮುರುಳಿಧರ್ ಮಾತನಾಡಿ, ತೇಜಸ್ವಿನಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದು, ನಾವೇ ಚಿನ್ನದ ಪದಕ ಪಡೆದಷ್ಟು ಸಂತೋಷವಾಗಿದೆ. ತೇಜಸ್ವಿನಿಯಂತೆ ಇತರೆ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಗ್ರಾಮಕ್ಕೆ ಕೀರ್ತಿತರಬೇಕೆಂದು ಆಶಯ ವ್ಯಕ್ತಪಡಿಸಿದರು.

ಶ್ರೀ ವಾಲ್ಮೀಕಿ ಸಂಘದ ದೇವರಾಜು ಕಾಟೂರು ಮಾತನಾಡಿ, ತೇಜಸ್ವಿನಿ ಸಾಧನೆಗೆ ಪಟ್ಟ ಪರಿಶ್ರಮವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಇತರೆ ವಿದ್ಯಾರ್ಥಿಗಳು ಕಷ್ಡಪಟ್ಟು ವಿದ್ಯಾಭ್ಯಾಸ ಮಾಡಿ ತೇಜಸ್ವಿನಿಯಂತೆ ಸಾಧನೆ ಮಾಡುವಂತೆ ಹುರಿದುಂಬಿಸಿದರು.

ಶಾಲೆಯ ಮುಖ್ಯಶಿಕ್ಷಕರಾದ ಎಸ್.ಎಂ. ಗಾಯಿತ್ರಿ, ಸಹಶಿಕ್ಷಕರಾದ ನಳಿನ್ ಕುಮಾರಿ, ತುಳಸಿಬಾಯಿ, ಪ್ರವೀಣ್ ಕುಮಾರ್, ನಜ್ರುಲ್ಲ, ಸಜೀಲ ಪರ್ವಿನ್, ದ್ರಾಕ್ಷಾಯಿಣಿ, ಬಂಗಾರ್ ನಾಯಕ್, ಚೌಡಯ್ಯ, ಎಸ್ ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಶಾಂತಕುಮಾರ್, ಮೂರ್ತಿ, ಗೀತಾ ಇದ್ದರು.

ತೇಜಸ್ವಿನಿ ಸಾಧನೆ ಹಾದಿ:

ತಲಕಾಡು ಹೋಬಳಿ ಮೇದನಿ ಗ್ರಾಮದ ವಿದ್ಯಾರ್ಥಿನಿಯಾದ ವಿ. ತೇಜಸ್ವಿನಿ, ತಲಕಾಡಿನ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದು ಇಲ್ಲಿನ ಗೂಳಬೋವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶ್ರಮದಿಂದ ವಿದ್ಯಾಭ್ಯಾಸ ನಡೆಸಿ ಎಲ್ಲರೂ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.

Share this article