ಯಕ್ಷಗಾನ ಕಲಾವಿದ ಭಾಸ್ಕರ ಜೋಶಿಗೆ ಸನ್ಮಾನ

KannadaprabhaNewsNetwork | Published : Dec 17, 2024 1:00 AM

ಸಾರಾಂಶ

ಶ್ರೀ ಭುವನೇಶ್ವರಿ ತಾಳಮದ್ದಳಾ ಕೂಟ ಭುವನಗಿರಿ ಇವರಿಂದ ಭರತಾಗಮನ ತಾಳಮದ್ದಲೆ ಪ್ರಸಂಗ ನಡೆಯಿತು.

ಸಿದ್ದಾಪುರ: ತಾಲೂಕಿನ ಅಳಗೋಡಿನ ರಾಮಕೃಷ್ಣ ತಿಮ್ಮಪ್ಪ ಹೆಗಡೆ ಅವರ ಮನೆಯಲ್ಲಿ ತಾಳಮದ್ದಲೆ ಅರ್ಥಧಾರಿಗಳಾಗಿದ್ದ ದಿ. ತಿಮ್ಮಪ್ಪ ತಿಮ್ಮಯ್ಯ ಹೆಗಡೆ ಅವರ ಸಂಸ್ಮರಣಾರ್ಥ ಹಿರಿಯ ಯಕ್ಷಗಾನ ಕಲಾವಿದರಾದ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಸನ್ಮಾನ ಹಾಗೂ ಭುವನೇಶ್ವರಿ ತಾಳಮದ್ದಳಾ ಕೂಟ ಭುವನಗಿರಿ ಇವರಿಂದ ತಾಳಮದ್ದಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸನ್ಮಾನ ಸ್ವೀಕರಿಸಿ ಮಾತಾನಾಡಿದ ಭಾಸ್ಕರ ಜೋಶಿ ಅವರು, ಯಕ್ಷಗಾನದಲ್ಲಿ ತಾವು ನಡೆದುಬಂದ ಹಾದಿಯನ್ನು ವಿವರಿಸಿ, ಎದುರಿಸಿದ ಸವಾಲುಗಳ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ಜಿ. ಮಂಜುನಾಥ ಕೆಳಮನೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಧರ ಭಟ್ಟ ಮುತ್ತಿಗೆ, ಜಯರಾಮ ಭಟ್ಟ ಗುಂಜಗೋಡ ಉಪಸ್ಥಿತರಿದ್ದರು. ರಾಮಕೃಷ್ಣ ತಿಮ್ಮಪ್ಪ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಟಿ.ಎಂ. ರಮೇಶ ಸನ್ಮಾನ ಪತ್ರ ವಾಚಿಸಿದರು.

ಜಯರಾಮ ಭಟ್ಟ ಗುಂಜಗೋಡ ಅಭಿನಂದನಾ ನುಡಿ ತಿಳಿಸಿದರು. ಕೌಸ್ತುಭ ಹೆಗಡೆ ಅಳಗೋಡ ನಿರ್ವಹಿಸಿದರು. ಶ್ರೀ ಭುವನೇಶ್ವರಿ ತಾಳಮದ್ದಳಾ ಕೂಟ ಭುವನಗಿರಿ ಇವರಿಂದ ಭರತಾಗಮನ ತಾಳಮದ್ದಲೆ ಪ್ರಸಂಗ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕೆ.ಜಿ. ರಾಮರಾವ್ ಕೆಳಮನೆ ಮತ್ತು ಕೆ.ಜಿ. ಮಂಜುನಾಥ ಕೆಳಮನೆ, ಮದ್ದಳೆ ವಾದಕರಾಗಿ ಮಂಜುನಾಥ ಹೆಗಡೆ ಕಂಚಿಮನೆ, ಚಂಡೆವಾದಕರಾಗಿ ಮಿತ್ರ ಮಧ್ಯಸ್ಥ ಗೊರಮನೆ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಟಿ.ಎಂ. ರಮೇಶ(ಶ್ರೀರಾಮ-೧), ಗಣಪತಿ ಹೆಗಡೆ ಗುಂಜಗೋಡ(ಶ್ರೀರಾಮ-೨), ಮಹಾಬಲೇಶ್ವರ ಭಟ್ಟ ಗುಂಜಗೋಡ (ಗುಹ), ಗಣಪತಿ ಹೆಗಡೆ ಹೊನ್ನೆಕೈ(ಲಕ್ಷ್ಮಣ), ಜಯರಾಮ ಭಟ್ಟ ಗುಂಜಗೋಡ(ವಸಿಷ್ಠ), ಕೌಸ್ತುಭ ಹೆಗಡೆ ಅಳಗೋಡ(ಭರತ) ಪಾಲ್ಗೊಂಡಿದ್ದರು.

೨೧ರಂದು ವಿಶ್ವದರ್ಶನ ಸಂಭ್ರಮ ಆಚರಣೆ

ಯಲ್ಲಾಪುರ: ನಮ್ಮ ಸಂಸ್ಥೆ ಕೇವಲ ನಾಲ್ಕೇ ವರ್ಷದಲ್ಲಿ ನಿರೀಕ್ಷೆಗೆ ಮೀರಿ ಪ್ರಗತಿ ಸಾಧಿಸಿದೆ. ಇನ್ನು ಹೆಚ್ಚಿನ ಸಾಧನೆ ಮಾಡುವ ಹಂಬಲದೊಂದಿಗೆ ಮುನ್ನಡೆದಿದ್ದೇವೆ. ಅದಕ್ಕೆ ಪೂರಕವಾಗಿ ಇಲ್ಲಿನ ಪಾಲಕರು ಕೂಡಾ ಬೆಂಬಲಿಸುತ್ತಿದ್ದಾರೆ. ನಮ್ಮ ಸಂಸ್ಥೆಯ ಆವಾರದಲ್ಲಿ ಪ್ರತಿ ವರ್ಷದಂತೆ ಡಿ. ೨೧ರಂದು ದಿನವಿಡಿ ವಿಶ್ವದರ್ಶನ ಸಂಭ್ರಮವನ್ನು ಆಯೋಜಿಸಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ತಿಳಿಸಿದರು.ಡಿ. ೧೬ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗಲೆಂಬ ಉದ್ದೇಶದಿಂದ ಬೆಳಗಿನಿಂದ ಸಂಜೆಯವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಕ್ಷೇತ್ರದ ಧುರೀಣರು, ಪ್ರಮುಖರು, ಸಹಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಾಗರ ತಾಲೂಕಿನ ಮತ್ತಿಕೊಪ್ಪದ ಸಹಕಾರರತ್ನ ಪ್ರಶಸ್ತಿ ಪುರಸ್ಕೃತ ಎಲ್.ಬಿ. ಕಾಲೇಜಿನ ಅಧ್ಯಕ್ಷ ೮೦ರ ಹರೆಯದ ಹರನಾಥ ರಾವ್ ಅವರಿಗೆ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ವಿಶ್ವದರ್ಶನ ಪುರಸ್ಕಾರ ನೀಡಲಾಗುವುದು ಎಂದರು.ವಿಶ್ವದರ್ಶನ ಸಂಭ್ರಮದಂದು ಅಗತ್ಯವಾದ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಶಾಲಾ ಆವಾರದೊಳಗೆ ಜಂಕ್ ಫುಡ್ ಸೇರಿದಂತೆ ಹಲವು ಪದಾರ್ಥಗಳನ್ನು ನಿಷೇಧಿಸಲಾಗಿದೆ ಎಂದರು.

ಪ್ರಾಯೋಗಿಕವಾಗಿ ಆರಂಭ ಮಾಡಿದ್ದ ನಮ್ಮ ಸಂಸ್ಥೆಯ ಪತ್ರಿಕೋದ್ಯಮ ತರಗತಿಯ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಿಲೆಕ್ಷನ್ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಬಿಎ ಮತ್ತು ಬಿಎಸ್‌ಸಿ ಕೋರ್ಸ್‌ಗಳನ್ನು ಸಂಸ್ಥೆಯು ಆರಂಭಿಸಲಿದೆ. ಐಎಫ್‌ಎಸ್, ಐಎಎಸ್, ಕೆಎಎಸ್, ಐಪಿಎಸ್, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೇ, ಆಂಗ್ಲ ಮಾಧ್ಯಮದ ಮೂಲಕ ವಿನೂತನ ಮಾದರಿಯ ೧೧ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜೂನ್‌ನಿಂದ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.ಸಂಸ್ಥೆಯ ವ್ಯವಸ್ಥಾಪಕ ಅಜಯ ಭಾರತೀಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this article