ಕನ್ನಡಪ್ರಭ ವಾರ್ತೆ ಮಂಡ್ಯ
ವರನಟ ಡಾ.ರಾಜ್‌ಕುಮಾರ್ ಅವರ ೯೭ನೇ ವರ್ಷದ ಹುಟ್ಟುಹಬ್ಬವನ್ನು ಜಿಲ್ಲಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಆಹಾರ ಕಿಟ್ ವಿತರಣೆ, ಅನ್ನದಾಸೋಹ, ಸಿಹಿ ವಿತರಣೆ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಮೇರುನಟನನ್ನು ಸ್ಮರಿಸಿದರು.ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಜಿಲ್ಲಾಧ್ಯಕ್ಷ ಡಿ.ಅಶೋಕ್ ಮತ್ತು ಪದಾಧಿಕಾರಿಗಳು ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ನಗರದ ಜಯಚಾಮ ರಾಜೇಂದ್ರ ವೃತ್ತದಲ್ಲಿರುವ ಡಾ.ರಾಜ್‌ಕುಮಾರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಪ್ರಸ್ತುತ ಕನ್ನಡ ಚಿತ್ರರಂಗ ಅವನತಿಯ ಹಾದಿ ಹಿಡಿದಿದೆ. ಚಿತ್ರರಂಗವನ್ನು ಪುನರುಜ್ಜೀವನಗೊಳ್ಳಬೇಕಾದರೆ ಡಾ.ರಾಜ್‌ಕುಮಾರ್ ಅವರ ನಡವಳಿಕೆಗಳನ್ನು ಇಂದಿನ ಕಲಾವಿದರು ಅನುಸರಿಸಬೇಕು. ರಾಜ್‌ಕುಮಾರ್ ಈ ನಾಡಿನ ಆಸ್ತಿ. ಅವರ ಬದುಕೇ ಆದರ್ಶ. ಅವರು ಕೇವಲ ಚಿತ್ರಗಳಲ್ಲಿ ನಾಯಕರಾಗಿರದೆ ನಿಜಜೀವನದಲ್ಲೂ ನಾಯಕತ್ವ ಮತ್ತು ಸರಳತೆಯನ್ನು ರೂಢಿಸಿಕೊಂಡಿದ್ದಾಗಿ ತಿಳಿಸಿದರು.ಕನ್ನಡ ಕಲಿಗಳು, ಸಮಾಜಮುಖಿ ನಾಯಕರು, ದೇವರ ಪಾತ್ರಗಳಲ್ಲೂ ಕಣ್ಣಿಗೆ ಕಟ್ಟುವಂತೆ ನಟಿಸಿ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ. ಎಂತಹ ಸಂದರ್ಭದಲ್ಲೂ ಕಲೆಯನ್ನು ರಾಜಕೀಕರಣಗೊಳಿಸಲಿಲ್ಲ. ಸಿನಿಮಾವನ್ನು ಕಲೆಯಾಗಿ ಸ್ವೀಕರಿಸಿ ಚಿತ್ರರಂಗದ ಶ್ರೀಮಂತಿಕೆ, ಘನತೆ-ಗೌರವಗಳನ್ನು ಹೆಚ್ಚಿಸಿದರು ಎಂದರು.
ಜಿಲ್ಲಾಧ್ಯಕ್ಷ ಡಿ.ಅಶೋಕ್ ಮಾತನಾಡಿ, ಈ ವರ್ಷ ಮೇರುನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿಲ್ಲ. ಕಾರಣ ನಮ್ಮ ಕನ್ನಡಿಗರು ಮತ್ತು ದೇಶದ ಪ್ರವಾಸಿಗರನ್ನು ಜಮ್ಮು-ಕಾಶ್ಮೀರದ ಪಹಲಾಂನಲ್ಲಿ ಉಗ್ರರು ಅಟ್ಟಹಾಸ ಮೆರದು ಹಿಂದೂಗಳನ್ನು ಕೊಂದಿದ್ದಾರೆ ಎಂದು ವಿಷಾದಿಸಿದರು.ಜಿಲ್ಲಾ ಘಟಕ ಕಾರ್ಯದರ್ಶಿ ರಾಜೇಶ್, ಚಿತ್ರನಟ ಸಂಜಯ್‌ಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್, ಹೊಳಲು ನಾಗರಾಜ್, ನಗರಾಧ್ಯಕ್ಷ ಕಾರ್ತಿಕ್, ಮಲ್ಲೇಶ್, ಆನಂದ, ಅಅಬರೀಶ್ ಮತ್ತಿತರರಿದ್ದರು.
ಕಾಮನ ವೃತ್ತದಲ್ಲಿ ರಾಜ್ ಸ್ಮರಣೆ:ನಗರದ ಕಾಮನ ಸರ್ಕಲ್‌ನಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ರಾಜ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ವರನಟನ ಹುಟ್ಟುಹಬ್ಬ ಆಚರಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ರಾಜ್ ಅವರಂತಹ ಮೇರುನಟ ಭಾರತೀಯ ಚಿತ್ರರಂಗದಲ್ಲಿ ಮತ್ತೊಬ್ಬ ಸಿಗುವುದಿಲ್ಲ. ಅಂತಹ ವರನಟನಿಗೆ ಕೇಂದ್ರಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ರಾಜ್‌ಕುಮಾರ್. ಮೇರುನಟನೆಂಬ ಹಮ್ಮು-ಬಿಮ್ಮುಗಳಿಲ್ಲದೆ ಸರಳವಾಗಿ ಬದುಕಿ ಎಲ್ಲರಿಗೂ ಆದರ್ಶವಾಗಿದ್ದಾರೆ. ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಬಾಬಿ, ನಾಗರಾಜು, ಶ್ರೀಧರ್, ಗೌತಮ್, ನಿರಂಜನ್ ಇತರರಿದ್ದರು.
ಪೌರ ಕಾರ್ಮಿಕರಿಗೆ ಫುಡ್‌ಕಿಟ್ ವಿತರಣೆ:ಮಂಡ್ಯದ ಸ್ವರ್ಣಸಂದ್ರ ಬಡಾವಣೆಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ವರನಟ ಡಾ.ರಾಜ್ ಜನ್ಮದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರಿಗೆ ಫುಡ್‌ಕಿಟ್ ವಿತರಣೆ ಕಾರ್ಯಕ್ಕೆ ಸಂಘದ ಅಧ್ಯಕ್ಷ ನಾಗರಾಜ್ ಚಾಲನೆ ನೀಡಿದರು.
ಕಲೆಯನ್ನು ಬಹುವಾಗಿ ಪ್ರೀತಿಸಿದವರು, ಆರಾಧಿಸಿದವರು ರಾಜ್‌ಕುಮಾರ್. ಎಲ್ಲಾ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು. ಸರಳ ನಡೆ-ನುಡಿಗಳಿಂದಲೇ ಎಲ್ಲ್ರರ ಹೃದಯವನ್ನು ಗೆದ್ದರು ಎಂದು ಬಣ್ಣಿಸಿದರು.ಡಾ.ರಾಜ್ ಅವರ ಅಭಿಮಾನಿಗಳಾದ ಬಸವೇಗೌಡ, ನಿವೃತ್ತ ಅಧಿಕಾರಿ ಸಿದ್ದಪ್ಪ, ಎಂ.ಆರ್.ಎಂ.ರಘು, ಪಾಪಣ್ಣ, ತಿಲಕ್, ಬಸವರಾಜ್, ಚಿರಂಜೀವಿ, ರಾಜಣ್ಣ, ವೆಂಕಟೇಶ್ ಮತ್ತಿತರರಿದ್ದರು.
ರಾಜ್ ಜನ್ಮದಿನಕ್ಕೆ ಅನ್ನದಾಸೋಹ:ನಗರದ ಸಿಲರ್ ್ವಜ್ಯೂಬಿಲಿ ಉದ್ಯಾನವನದಲ್ಲಿ ಜಿಲ್ಲಾ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ವರನಟ ಡಾ.ರಾಜಕುಮಾರ್ ಅವರ ೯೭ನೇ ವರ್ಷದ ಜಯಂತಿ ಮತ್ತು ಡಾ.ಪುನೀತ್‌ರಾಜ್‌ಕುಮಾರ್ ಅವರ ೫೦ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ಕೆ ಅಧ್ಯಕ್ಷ ಕೆ.ಸಿ.ರವೀಂದ್ರಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಂದಿನ ಕಲಾವಿದರಿಗೆ ಡಾ.ರಾಜ್‌ಕುಮಾರ್ ಬಹುದೊಡ್ಡ ಆದರ್ಶವಾಗಿದ್ದಾರೆ. ಒಳ್ಳೆಯ ಸಿನಿಮಾ ಮಾಡುವುದಕ್ಕಿಂತ ಹೆಚ್ಚಾಗಿ ಹಣ ಮಾಡುವುದೇ ಈಗಿನವರ ಮುಖ್ಯ ಗುರಿಯಾಗಿದೆ. ಇದರ ಪರಿಣಾಮ ಚಿತ್ರರಂಗ ಅಧೋಗತಿಗೆ ಇಳಿದಿದೆ. ಕನ್ನಡ ಚಿತ್ರರಂಗಕ್ಕೆ ಗತವೈಭವ ಮರಳಬೇಕಾದರೆ ಚಿತ್ರರಂಗದವರೆಲ್ಲರೂ ಡಾ.ರಾಜ್‌ಕುಮಾರ್ ಹಾದಿಯಲ್ಲಿ ನಡೆದಾಗ ಮಾತ್ರ ಸಾಧ್ಯವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಡಾ.ರಾಜ್ ಅಭಿಮಾನಿಗಳಾದ ಪ್ರವೀಣ್‌ಕುಮಾರ್, ಸುರೇಶ್‌ಬಾಬು, ನಗರಸಭಾ ಮಾಜಿ ಸದಸ್ಯ ಆನಂದ್, ವೆಂಕಟೇಶ್, ಮೂರ್ತಿ ಮತ್ತಿತರರಿದ್ದರು. ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಸ್ಥಳದಲ್ಲೇ ಅನ್ನದಾಸೋಹ ನೆರವೇರಿಸಲಾಯಿತು.