ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಶನಿವಾರ ನಡೆದ ೮೦ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಹಾಗೂ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಾಪ್ ಹಾಗೂ ಕೆ. ಭಾರತಿ ಅವರನ್ನು ಸನ್ಮಾನಿಸಲಾಯಿತು. ಅಗ್ನಿಶಾಮಕ ಮತ್ತು ತುರ್ತು ಸೇವೆಯಲ್ಲಿ ೧೪ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ಹಲವು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಗೋಪಾಲಕೃಷ್ಣ ಅವರನ್ನು ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹರ್ಷವರ್ಧನ್ ಎಲ್.ಎಸ್. ಬಿನ್ ಶಿವಕುಮಾರ್ ಎಲ್.ಎಸ್. ಹಾಗೂ ಹಾಕಿ ವಿಶ್ವಕಪ್‌ಗೆ ಭಾರತ ತಂಡದ ಗೋಲ್‌ಕೀಪರ್ ಆಗಿ ಆಯ್ಕೆಯಾಗಿರುವ ಮೋಹಿತ್ ಎಚ್.ಎಸ್. ಬಿನ್ ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು.ಕಂದಾಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಾದ ಸುಮಂತ್, ಬೆಳಗುಂಬ ವೃತ್ತ, ಅರಸೀಕೆರೆ ಹಾಗೂ ಸುಬ್ರಮಣ್ಯ ಎಂ.ಎನ್., ನಲ್ಲೂರು ವೃತ್ತ, ಚನ್ನರಾಯಪಟ್ಟಣ ಅವರನ್ನು ಗೌರವಿಸಲಾಯಿತು.ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಸನಗೌಡ ಪಾಟೀಲ್, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಅರುಣ್, ಪೊಲೀಸ್ ಉಪನಿರೀಕ್ಷಕರು, ಶಾಂತಿಗ್ರಾಮ ಪೊಲೀಸ್ ಠಾಣೆ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಸೇವೆಗಾಗಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಬಿ. ಶೇಖರೇಗೌಡ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತೀರ್ಥಪ್ರಸಾದ್ ಅವರನ್ನು ಗೌರವಿಸಲಾಯಿತು. ಆರೋಗ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸಕಲೇಶಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಎ.ಎನ್. ಹಾಗೂ ಹಾಸನ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ನಿಸಾರ್ ಫಾತಿಮಾ ಅವರನ್ನು ಸನ್ಮಾನಿಸಲಾಯಿತು.ರಸ್ತೆ ಅಪಘಾತದ ಸಂದರ್ಭದಲ್ಲಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಸೇವೆ ಸಲ್ಲಿಸುತ್ತಿರುವ ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಕೃಷ್ಣಮೂರ್ತಿ ಎಂ.ಆರ್. ಅವರನ್ನು ಗೌರವಿಸಲಾಯಿತು. ಸಮಾಜ ಸೇವೆಗಾಗಿ ಕಳೆದ ೧೫ ವರ್ಷಗಳಿಂದ ನಿರ್ಗತಿಕರಿಗೆ ವಿವಿಧ ರೀತಿಯ ನೆರವು ನೀಡುತ್ತಿರುವ ನೂರ್ ಅಹಮದ್, ಸರ್ಕಾರಿ ಶಾಲೆಗಳು ಹಾಗೂ ಅಂಗವಿಕಲರಿಗೆ ನೆರವು ನೀಡುತ್ತಿರುವ ವಿಜಯ್ ಕುಮಾರ್ ಎಲ್.ಕೆ. ಬಿನ್ ಲೇಟ್ ಕಾಂತೇಗೌಡ, ಬಡ ವಿದ್ಯಾರ್ಥಿಗಳು, ಕುಟುಂಬಗಳು ಹಾಗೂ ಮಹಿಳೆಯರಿಗೆ ನೆರವಾಗುತ್ತಿರುವ ಇಮಾದ್ ಅಹಮದ್ ದೇಸಾಯಿ ಬಿನ್ ಹುಸೇನ್ ಖಾನ್ ದೇಸಾಯಿ ಹಾಗೂ ೩೫ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಬೀಬುಲ್ಲಾ ಬಿನ್ ವಜೀರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಲತಾ ಕೋಂ ಯೋಗಣ್ಣ ಅವರನ್ನು ಸಹ ಗೌರವಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗುರುತಿಸಿ ಗೌರವಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಸೇವಾ ಮನೋಭಾವವನ್ನು ಜಿಲ್ಲಾಡಳಿತ ಪ್ರೋತ್ಸಾಹಿಸಿತು.