ಕನ್ನಡಪ್ರಭ ವಾರ್ತೆ ಶ್ರೀರಂಗಟಪ್ಟಣ
ಇತೀಚೆಗೆ ನಿಧನರಾದ ರೈತ ಸಂಘದ ಹೋರಾಟಗಾರ ಪಾಲಹಳ್ಳಿ ರಾಮೇಗೌಡರಿಗೆ ಪಟ್ಟಣದ ಯುವಜನ ಕ್ರೀಡಾ ಇಲಾಖೆ ಕಚೇರಿ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ರೈತ ಸಂಘದ ತಾಲೂಕು ಅಧ್ಯಕ್ಷ ಶಂಭುಗೌಡರು ಮೃತ ರಾಮೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಮಾತನಾಡಿ, ಕಳೆದ 40 ವರ್ಷಗಳಿಂದ ರೈತ ಪರವಾಗಿ ಹೋರಾಟ ನಡೆಸಿದ ರಾಮೇಗೌಡರು ಹಲವಾರು ಹೋರಾಟಗಳ ಮೂಲಕ ರೈತರ ಧ್ವನಿ ಯಾಗಿದ್ದರು ಎಂದರು.
ಜನಪರ ಕಾರ್ಯಕ್ರಮದೊಂದಿಗೆ ತಮ್ಮ ಜೀವಿತಾವಧಿವರೆಗೂ ಯಾವ ಪಕ್ಷಗಳ ಜೊತೆ ಗುರುತಿಸಿಕೊಳ್ಳದೆ ರೈತ ಸಂಘಕ್ಕಾಗಿ ದುಡಿದಿದ್ದಾರೆ. ಅವರ ಆದರ್ಶಗಳೆ ಪ್ರಸ್ತುತ ಯುವ ರೈತರಿಗೆ ಮಾರ್ಗದರ್ಶನವಾಗಿದೆ ಎಂದರು.ನಂತರ ರೈತ ಸಂಘದ ಮಾಜಿ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಮಾತನಾಡಿ, ರಾಮೇಗೌಡರು ಜಿಲ್ಲೆಯಲ್ಲಿ ರೈತರ ಪರ ಹೋರಾಟಗಳಲ್ಲಿ ಭಾಗವಹಿಸಿ ಮಾದರಿಯಾಗಿದ್ದರು. ಅವರ ಹೋರಾಟಗಳ ನೋಡಿ ಕಲಿತಿರುವ ನಾವುಗಳು ಇನ್ನು ಮುಂದೆ ಅವರಂತೆ ಜನಪರವಾದ ಹೋರಾಟಗಳಿಗೆ ಶ್ರಮಿಸಲುಮುಂದಾಗುತ್ತೇವೆ ಎಂದರು.
ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶ್ರೇಖರ್, ಮುಖಂಡರಾದ ಕಡತನಾಳು ಬಾಲಕೃಷ್ಣ ದೊಡ್ಡಪಾಳ್ಯ ಜಯರಾಮು, ಪುರುಷೋತ್ತಮ, ಬಿಎಸ್. ರಮೇಶ್, ಕೃಷ್ಣೇಗೌಡ, ಪ್ರಿಯಾರಮೇಶ್ ಗಂಜಾಂ ರವಿಚಂದ್ರ, ಶ್ರೀನಿವಾಸ್, ನಾಗರಾಜು ಸೇರಿದಂತೆ ಇತರ ಮುಖಂಡರು ಹಾಜರಿದ್ದು ಪುಷ್ಪಾರ್ಚನೆ ಮಾಡಿ ಸ್ಮರಿಸಿದರು.ನಮ್ಮ ಸಮೀಕ್ಷೆ -ನಮ್ಮ ಜವಾಬ್ದಾರಿ ಕಾರ್ಯಕ್ರಮ
ಪಾಂಡವಪುರ: ತಾಲೂಕಿನ ಮಡಿವಾಳರ ಸಂಘದ ಅಧ್ಯಕ್ಷ ಎಚ್.ಎನ್.ರಾಮಚಂದ್ರ ನೇತೃತ್ವದಲ್ಲಿ ನಮ್ಮ ಸಮೀಕ್ಷೆ -ನಮ್ಮ ಜವಾಬ್ದಾರಿ ಕಾರ್ಯಕ್ರಮ ನಡೆಯಿತು.ಮಡಿವಾಳ ಸಮಾಜದ ಇಸ್ತ್ರಿ ಅಂಗಡಿಗಳಿಗೆ ಮತ್ತು ಮನೆಗಳಿಗೆ ತೆರಳಿ ಜಾಗೃತಿ ಸಂದೇಶ ನೀಡಲಾಯಿತು. ಸೆ.22 ರಿಂದ ಅ.7ರವರೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯಲಿರುವ ಜಾತಿ ಜನಗಣತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಗಣತಿ ವೇಳೆ ಸಮಿಕ್ಷಾದಾರಿಗೆ ಧರ್ಮ-ಹಿಂದೂ. ಜಾತಿ-ಮಡಿವಾಳ ಎಂದು ಹೇಳಬೇಕು. ಜೊತೆಗೆ ಮಡಿವಾಳ ಕೋಡ್ ಸಂಖ್ಯೆ A-0903 ಎಂದು ನೋಂದಣಿ ಮಾಡಿಸಬೇಕಾಗಿ ಸಂಘದ ಸದಸ್ಯರಾದ ಚಿಕ್ಕಾಡೆ ರವಿಕುಮಾರ್. ರಘು ಅಗಟಹಳ್ಳಿ ಅವರೊಂದಿಗೆ ಮಾಹಿತಿ ತಿಳಿಸಿದರು.