ಎಫ್‌ಎಂಕೆಎಂಸಿ ಕಾಲೇಜ್‌ ವಿದ್ಯಾರ್ಥಿಗಳಿಗೆ ತ್ರಿವಳಿ ರ‍್ಯಾಂಕ್

KannadaprabhaNewsNetwork | Published : Jun 10, 2024 12:45 AM

ಸಾರಾಂಶ

ಕೊಡವ ಎಂ ಎ ಸ್ನಾತಕೋತ್ತರ ಪದವಿಯಲ್ಲಿ ಲೇಖಕಿ ಕವಯಿತ್ರಿ ಹೇಮಾವತಿ ಬಿ.ಎನ್‌. ಪ್ರಥಮ ಸ್ಥಾನ ಗಳಿಸುವ ಮೂಲಕ ಕೊಡವ ಭಾಷೆ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ಹಿರಿಮೆ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾಲಯದ ಮೂರು ರ‍್ಯಾಂಕ್ ಗಳು ಸಂದಿವೆ. ಜೊತೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಒಂದು ನಗದು ಪುರಸ್ಕಾರವನ್ನು ಕಾಲೇಜಿನ ವಿದ್ಯಾರ್ಥಿನಿಯೂ ಪಡೆದುಕೊಂಡಿದ್ದಾರೆ.

75 ವರ್ಷಗಳ ಸುದೀರ್ಘ ಇತಿಹಾಸವಿರುವ, ಸುವರ್ಣ ಮಹೋತ್ಸವ ಸಂಭ್ರಮದ ಹೊಸ್ತಿಲಿನಲ್ಲಿರುವ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕೊಡಗು ವಿಶ್ವವಿದ್ಯಾಲಯಗಳ ಘಟಕ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿದೆ.

ಕೊಡವ ಎಂ ಎ ಸ್ನಾತಕೋತ್ತರ ಪದವಿಯಲ್ಲಿ ಲೇಖಕಿ, ಕವಯಿತ್ರಿ ಹೇಮಾವತಿ ಬಿ ಎನ್ ಅವರು ಪ್ರಥಮ ರ‍್ಯಾಂಕ್ ನೊಂದಿಗೆ ಪೂರೈಸುವ ಮೂಲಕ ಕೊಡವ ಭಾಷೆ, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಹಿರಿಮೆಯನ್ನು ತಂದಿದ್ದಾರೆ.

ಅದೇ ರೀತಿ ಶಶಿ ಕಿರಣ್ ವೈ ಆರ್ - ಪಿಜಿ ಡಿಪ್ಲೊಮಾ ಯೋಗ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇವರು 63 ವಯಸ್ಸಿನ ವಿದ್ಯಾರ್ಥಿನಿಯಾಗಿದ್ದು ಯೋಗವಿಜ್ಞಾನದಂತಹ ಶಾಸ್ತ್ರೀಯ ವಿಷಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಗ್ರೀಷ್ಮಾ ಕೆ ಎ ಅವರು ಎಂ ಎ ಅರ್ಥಶಾಸ್ತ್ರದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿರುತ್ತಾರೆ. ಇವರು ಈ ಹಿಂದೆ ಪಿಯು ಕಲಾವಿಭಾಗದಲ್ಲಿ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಅದೇ ರೀತಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ಹಂತದಲ್ಲಿ ಸೂಕ್ಷ್ಮ ಜೀವವಿಜ್ಞಾನ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿ ಹಿಬಾತುಲ್ ಬಾರಿ ಅವರಿಗೆ ಪ್ರೊ. ಜಿ. ವಿ ಭಟ್ ಮೆಮೋರಿಯಲ್ ನಗದು ಪುರಸ್ಕಾರ ಲಭಿಸಿದೆ. ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್ ಮೈಕ್ರೋ ಬಯೋಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ.

ಮಂಗಳೂರು/ಕೊಡಗು ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ಅಧ್ಯಾಪಕ ವೃಂದದ ಬೆಂಬಲದೊಂದಿಗೆ, ಪೋಷಕ ಶಿಕ್ಷಕ ಸಂಘದ ನೆರವಿನ ಜೊತೆಯಲ್ಲಿ, ದಾನಿಗಳ, ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಈ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

11ರಂದು ಸಾಧಕರಿಗೆ ಸನ್ಮಾನ: ಇದೇ ಜೂನ್ 11ರಂದು ಕಾಲೇಜಿನ ವಾರ್ಷಿಕೋತ್ಸವದಲ್ಲಿ ಈ ಸಾಧಕರನ್ನು ಸನ್ಮಾನಿಸಲಾಗುವುದು. ಜೂನ್ 15ರಂದು ನಡೆಯುವ ಮಂಗಳೂರು ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಂದ ಪ್ರಶಸ್ತಿ ಸಹಿತ ರ‍್ಯಾಂಕ್ ಪ್ರಮಾಣ ಪತ್ರವನ್ನು ಸ್ವೀಕರಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದರು.

Share this article