ನಾಟಕಗಳಲ್ಲಿ ಹಾಡುವ ಹಳ್ಳಿ ಹಕ್ಕಿ ಸಂಕಷ್ಟದಲ್ಲಿ

KannadaprabhaNewsNetwork |  
Published : Mar 08, 2026, 02:30 AM IST
ಬಸವರಾಜ 1, 2 | Kannada Prabha

ಸಾರಾಂಶ

ರೋಣ ತಾಲೂಕಿನ ಬಿ.ಎಸ್. ಬೇಲೇರಿ ಗ್ರಾಮದ ಬಡ ಕಲಾವಿದ ಬಸವರಾಜ ಹೊಳಿಯಪ್ಪ ಮಾದರ ನಾಟಕಗಳಲ್ಲಿ ಹಾಡುವುದರಲ್ಲಿ ಪ್ರಸಿದ್ಧರು. ಆದರೆ ಸಹೋದರನಿಗೆ ಕ್ಯಾನ್ಸರ್‌ ಅಂಟಿಕೊಂಡಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ.

ರೋಣ: ಅವನು ದೊಡ್ಡ ವೇದಿಕೆಗಳಲ್ಲಿ ಬೆಳಗಿದ ಕಲಾವಿದನಲ್ಲ. ಅವನಿಗೆ ಪ್ರಖ್ಯಾತಿ ಅಥವಾ ಪ್ರಶಸ್ತಿಗಳ ಕಿರೀಟಗಳಿಲ್ಲ. ಆದರೆ ಅವನ ಕಂಠಕ್ಕೆ ಸಾವಿರಾರು ಜನರನ್ನು ಆಕರ್ಷಿಸುವ ಶಕ್ತಿ ಇದೆ. ಹಳ್ಳಿಯ ನಾಟಕ, ಜಾತ್ರೆ, ಕಾರ್ಯಕ್ರಮಗಳು ಈತನ ಗಾಯನವಿಲ್ಲದೇ ಅವು ಪೂರ್ಣವಾಗುವುದಿಲ್ಲ...

ಇದು ರೋಣ ತಾಲೂಕಿನ ಬಿ.ಎಸ್. ಬೇಲೇರಿ ಗ್ರಾಮದ ಬಡ ಕಲಾವಿದ ಬಸವರಾಜ ಹೊಳಿಯಪ್ಪ ಮಾದರ ಎಂಬ ಹಳ್ಳಿ ಹಕ್ಕಿಯ ಪುಟ್ಟ ಪರಿಚಯ.

ಹವ್ಯಾಸವಾಗಿ ಕಲಿತ ಹಾಡು ಇಂದು ಈತನ ಬದುಕಿನ ಬಂಡಿ ಸಾಗಿಸುತ್ತಿದೆ. ಹಳ್ಳಿಗಳಲ್ಲಿ ಪ್ರದರ್ಶನವಾಗುವ ನಾಟಕಗಳಲ್ಲಿ ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳ ಮನ ತಣಿಸುವ ಈತ ಯಾವುದೇ ಶಾಸ್ತ್ರಬದ್ಧ ಸಂಗೀತವನ್ನೇನೂ ಕಲಿತಿಲ್ಲ. ಆದರೆ, ಸಂಗೀತದ ಎಲ್ಲ ಲಯಗಳನ್ನೂ ಅರಗಿಸಿಕೊಂಡಿದ್ದಾನೆ. ಅಲ್ಲದೆ, ಶಶಿ ಅವರ ಬ್ಯಾಂಡ್‌ನಲ್ಲಿ ಪ್ರಮುಖ ಹಾಡುಗಾರ ಈತನೇ. ನಾಟಕಗಳಲ್ಲಿ ಹೆಣ್ಣಿನ ಪಾತ್ರವಿರಲಿ, ಗಂಡಿನ ಪಾತ್ರವೇ ಇರಲಿ ಇಬ್ಬರಿಗೂ ಈತನದ್ದೇ ಹಿನ್ನೆಲೆ ಗಾಯನ. ಹೆಣ್ಣಿನ ಧ್ವನಿಯಲ್ಲೂ ಈತ ಸರಾಗವಾಗಿ ಹಾಡಬಲ್ಲ.

ಬಾದಾಮಿಯ ಗುರು ಪುಟ್ಟರಾಜ ಮೆಲೋಡಿ ಬ್ಯಾಂಡ್‌ನಲ್ಲಿ ಕೆಲಸ ಮಾಡುತ್ತ ರಾಜ್ಯಾದ್ಯಂತ ಚಿರಪರಿಚಿತ ಗಾಯಕನಾಗಿರುವ ಬಸವರಾಜ, ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದಾನೆ.

ಬ್ಯಾಂಡ್ ಮಾಲೀಕರು ಮತ್ತು ನಾಟಕಗಳಲ್ಲಿ ಸಿಗುವ ಅಲ್ಪ ಸ್ವಲ್ಪ ಹಣದಲ್ಲಿ ಹಾಗೋ ಹೀಗೋ ಜೀವನ ನಡೆಯುತ್ತಿದೆ. ಈಗಾಗಲೇ ಹಲವು ಟಿವಿ ಚಾನೆಲ್‌ಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಆಡಿಶನ್ ಕೊಟ್ಟಿದ್ದಾನೆ. ಆದರೆ, ಅದೃಷ್ಟ ಕೈ ಹಿಡಿದಿಲ್ಲ.

ಖುಷಿ ನುಂಗಿದ ಕ್ಯಾನ್ಸರ್: ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಸಂತಸಗೊಳಿಸುವ ಈತನ ಜೀವನದಲ್ಲಿ ಮಾತ್ರ ಖುಷಿ ಎನ್ನುವುದು ಮರೆಯಾಗಿದೆ. ಕಾರಣ, ಸಹೋದರನಿಗೆ ಅಂಟಿಕೊಂಡಿರುವ ಕ್ಯಾನ್ಸರ್.

ತಂದೆ ಹೂಳಿಯಪ್ಪ- ತಾಯಿ ರೇಣವ್ವ ಕೃಷಿ ಕೂಲಿಕಾರರು. ಸಹೋದರ ಮಂಜುನಾಥನಿಗೆ ಕ್ಯಾನ್ಸರ್ ಬಂದಾಗಿನಿಂದ ಕುಟುಂಬದಲ್ಲಿನ ನೆಮ್ಮದಿ ಮರೆಯಾಗಿದೆ. ಕಡು ಬಡತನದಲ್ಲೇ ಬಸವರಾಜ ಅವರಿವರ ಬಳಿ ಸುಮಾರು ₹6 ಲಕ್ಷ ಸಾಲ ಮಾಡಿ ಸಹೋದರನಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡಿಸಿದ್ದಾನೆ. ಆದರೆ, ಪ್ರತಿ ಬಾರಿಯ ಚಿಕಿತ್ಸೆಯ ವೆಚ್ಚಕ್ಕೆ ಹಣ ಹೊಂದಿಸಲಾಗದೆ, ಈಗಾಗಲೇ ಸಾಲ ಮಾಡಿರುವ ಹಣವನ್ನೂ ಮರಳಿಸಲು ಹೆಣಗಾಡುವಂತಾಗಿದೆ.ಈಗಾಗಲೇ ರೆಡಿಯೇಷನ್ ಥೆರಪಿ, ಕಿಮೋ ಚುಚ್ಚುಮದ್ದು, ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಅಲ್ಲದೇ ಇನ್ನೂ ಸ್ಕ್ಯಾನಿಂಗ್ ಸೇರಿ ವಿವಿಧ ರೀತಿಯ ಚಿಕಿತ್ಸೆ ಅಗತ್ಯವಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಸಹೋದರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿದೆ. ಹೀಗಾಗಿ, ಬಡಕಲಾವಿದ ನೆರವಿಗಾಗಿ ಎದುರು ನೋಡುತ್ತಿದ್ದಾನೆ. ಆಸಕ್ತರು (ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಖಾತೆ ಸಂಖ್ಯೆ 89121685939 ಐಎಫ್ ಎಸ್ ಸಿ ಕೋಡ್ KVGB0006311) ಮೊ. 6362364300ಗೆ ಸಂಪರ್ಕಿಸಬಹುದು.

ಕಳೆದ ಎಂಟು ವರ್ಷಗಳಿಂದ ನಮ್ಮ ಬ್ಯಾಂಡ್ ನಲ್ಲಿ ಬಸವರಾಜ ಪ್ರಮುಖ ಹಾಡುತ್ತಿದ್ದು, ತನ್ನ ಹಾಡಿನ ಮೂಲಕ ಜನರ ಮನತಣಿಸುತ್ತಾನೆ. ಆದರೆ, ಆತನ ಬದುಕಲ್ಲಿ ಬಿರುಗಾಳಿ ಬೀಸಿದೆ. ಸಹೋದರನಿಗೆ ಅಂಟಿಕೊಂಡಿರುವ ಕ್ಯಾನ್ಸರ್‌ನಿಂದ ನೆಮ್ಮದಿ ದೂರವಾಗಿದೆ. ನಾವೂ ಕೈಲಾದ ಸಹಾಯ ಮಾಡಿದ್ದೇವೆ. ಆದರೂ ಚಿಕಿತ್ಸೆಗೆ ಇನ್ನೂ ಹಣದ ಅವಶ್ಯಕತೆ ಇದೆ ಎಂದು ಬಾದಾಮಿ ಗುರು ಪುಟ್ಟರಾಜ ಮೆಲೋಡಿಸ್‌ನ ಶಬ್ಬೀರ ಬಿ. ನಾಯಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇರಾನ್‌ ಮೇಲಿನ ದಾಳಿ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ
ಜನಪದ ಸಾಹಿತ್ಯ ಜೀವನ ಮೌಲ್ಯ, ಶ್ರಮ ಸಂಸ್ಕೃತಿಯ ಪ್ರತೀಕ: ರಾಮು ಮೂಲಗಿ