ಕನ್ನಡಪ್ರಭ ವಾರ್ತೆ ಮಡಿಕೇರಿ
ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ನಡೆದಿರುವ ಹಲ್ಲೆಯನ್ನು ಕೊಡವ ಟ್ರಸ್ಟ್ ಖಂಡಿಸಿದ್ದು, ಕಟ್ಟೆಮಾಡು ದೇವಾಲಯದ ವಾರ್ಷಿಕ ಹಬ್ಬದ ಸಮಯದಲ್ಲಿ ನಡೆದ ಅಹಿತಕರ ಘಟನೆಯನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ಸಂಘ ಸಂಸ್ಥೆಗಳು ವಿಫಲವಾಗಿದ್ದೇ ಇಂತಹ ಘಟನೆ ನಡೆಯಲು ಪ್ರಮುಖ ಕಾರಣ ಎಂದು ಆರೋಪಿಸಿದೆ.ಸುದ್ದಿಗೋಷ್ಠಿ ನಡೆಸಿದ ಟ್ರಸ್ಟಿನ ಪ್ರಮುಖರು, ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ನಡುವೆ ಬೇರೆ ಬೇರೆ ಕಾರಣಕ್ಕೆ ಸ್ವಲ್ಪ ಮಟ್ಟಿನ ಹಗತನ, ಪೈಪೋಟಿಯಿದೆ.
1991ರಲ್ಲಿ ಕೊಡಗು ಏಕೀಕರಣ ರಂಗ ಈ ಪರಿಪಾಠಕ್ಕೆ ಪೂರ್ಣ ವಿರಾಮ ಹಾಕುವ ಪ್ರಯತ್ನ ನಡೆಸಿ ಸಾಕಷ್ಟು ಯಶಸ್ಸು ಕಂಡಿತ್ತು. ಆದರೆ ರಾಜಕೀಯ ಪಕ್ಷಗಳು ಮತ್ತು ಕೆಲ ಜನನಾಯಕರು ಜಾತಿ ಜಾತಿ ನಡುವಿನ ಕಂದಕವನ್ನು ರಾಜಕೀಯ ಕಾರಣಕ್ಕೆ ಜೀವಂತವಾಗಿಟ್ಟಿದ್ದಾರೆ ಎಂದು ದೂರಿದರು.ಈ ಹಲ್ಲೆ ಪ್ರಕರಣವು ಕೆಲವು ವ್ಯಕ್ತಿಗಳ ನಡುವಿನ ಘರ್ಷಣೆಯೇ ಹೊರತು ಜನಾಂಗಗಳ ನಡುವಿನ ಘರ್ಷಣೆಯಾಗಿರುವುದಿಲ್ಲ ಎಂಬುದಾಗಿ ನಾವು ಸ್ಪಷ್ಟ ಪಡಿಸುತ್ತಿದ್ದೇವೆ
ಈ ಘಟನೆಯಲ್ಲಿ ಜನಾಂಗಗಳ ನಡುವಿನ ಘರ್ಷಣೆಯೆಂದು ಕೊಡಗಿನ ಜನತೆ ಬಿಂಬಿಸಬಾರದೆಂದು ಮನವಿ ಮಾಡಿದರು.ಅರ್ಚಕರಿಗೆ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇವೆ ಎಂದರು.
ಇಂದಿನ ಸೂಕ್ಷ್ಮ ಸನ್ನಿವೇಶದಲ್ಲಿ ಎಲ್ಲಾ ಜನಾಂಗದ ನಾಯಕರು, ರಾಜಕೀಯ ನಾಯಕರು, ಸಮುದಾಯಗಳ ಪ್ರಜ್ಞಾವಂತ ಹಿರಿಯರು ಈ ಬಗ್ಗೆ ಚರ್ಚಿಸಿ, ಈ ರೀತಿಯ ಸಂಘರ್ಷಕ್ಕೆ ವಿರಾಮ ಕೊಡುವುದು ಒಳ್ಳೆಯದು. ಈ ಮೇಲೆ ಹೇಳಿದ ಎಲ್ಲರೂ ಸುಳ್ಳು ವದಂತಿಗೆ ಕಿವಿಕೊಡದೆ ಸ್ವಯಂ ನಿಯಂತ್ರಣ ಹೇರಿಕೊಂಡು ಸೌಹಾರ್ದಯುತ ಸಹಬಾಳ್ವೆಗೆ ಮುಂದಾಗಬೇಕೆಂದು ಕೋರಿದರು.