ಕಡೂರು: ಜನವಸತಿ ಪ್ರದೇಶಗಳನ್ನೂ ಅರಣ್ಯ ಭೂಮಿ ಎಂದು ಗುರುತಿಸಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಸೂಚಿಸಿದರು.
ತಹಸೀಲ್ದಾರ್ ರ್ಪೂರ್ಣಿಮಾ ಜತೆ ಚರ್ಚಿಸಿದ ಶಾಸಕ ಆನಂದ್, ತಹಸೀಲ್ದಾರ್ ಮತ್ತು ಅರಣ್ಯಾಧಿಕಾರಿ ಕುಳಿತು ಮಾತನಾಡಿ ಬೇರೆ ಜಾಗ ಗುರುತಿಸಿ. ಈ ಹಿಂದೆ ಜಿಲ್ಲಾಧಿಕಾರಿ ನೀಡಿರುವ ಆದೇಶ ಏನು ಎನ್ನುವ ದಾಖಲೆ ತೆಗೆಸಿ, ನೀಡಿದಲ್ಲಿ ಜಿಲ್ಲಾಧಿಕಾರಿ ಬಳಿ ನಾನು ಮಾತನಾಡುತ್ತೇನೆ. ಆದರೆ ಅರಣ್ಯ ಭೂಮಿಯ ಪರಿವರ್ತನೆ ಅಷ್ಟು ಸುಲಭವಿಲ್ಲ ಎನ್ನುವುದು ಗ್ರಾಮಗಳ ಜನರ ಗಮನದಲ್ಲಿರಲಿ ಎಂದರು. ಪಂಚಾಯ್ತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಶಾಲೆಗೆ ಕಾಂಪೌಂಡ್, ಪಂಚಾಯಿತಿಗೆ ಹೊಸಕಟ್ಟಡ, ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಕಚೇರಿ ಗುರುತಿಸಿ ಕೊಡಿ, 2ನೇ ಅಂಗನವಾಡಿಗೆ ಕಟ್ಟಡ ಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆನಂದ್, ಅನೇಕ ಗ್ರಾಮ ಪಂಚಾಯಿತಿಗಳು ಕೋಟ್ಯಂತರ ರು. ಮೊತ್ತದ ಎನ್ಆರ್ಇಜಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿವೆ. ನನ್ನ ಅವಧಿಯಲ್ಲಿಯೇ ತಲಾ 25 ಲಕ್ಷ ರು. ನೀಡುವ ಮುಖೇನ 15ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಭೂಮಿಪೂಜೆ ನಡೆದು 6 ಕಟ್ಟಡಗಳ ಉದ್ಘಾಟನೆಯೂ ಆಗಿದೆ. ಆದರೆ ಬಾಸೂರು ಪಂಚಾಯಿತಿ ಸ್ವಂತ ಕಟ್ಟಡ ಹೊಂದಲು ನಿರ್ಲಕ್ಷ್ಯ ಹೊಂದಿರುವ ಜತೆಗೆ ಕ್ರಿಯಾಯೋಜನೆ ರೂಪಿಸುವಲ್ಲಿಯೇ ಅತ್ಯಂತ ಹಿಂದುಳಿದಿದೆ. ಇಲ್ಲಿ ಬಹಳಷ್ಟು ಕೆಲಸಗಳನ್ನು ನರೇಗಾದಲ್ಲಿ ನಿರ್ವಹಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿ, ಹೊಸದಾಗಿ ಬಂದಿರುವ ಪಿಡಿಒ ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಸಿ.ಆರ್.ಪ್ರವೀಣ್, ಗ್ರಾ.ಪಂ. ಅಧ್ಯಕ್ಷೆ ಪ್ರಿಯಾ ನಾಗರಾಜ್, ಉಪಾಧ್ಯಕ್ಚೆ ಕವಿತಾ, ಸದಸ್ಯರಾದ ಕವಿತಾ.ಆರ್, ಗೌರಮ್ಮ, ಬಿ.ಪಿ.ನಾಗಭೂಷಣ್, ಶ್ರೀಕಾಂತ್, ಸಿ.ಕೆ.ಪರಮೇಶ್ವರಪ್ಪ, ನರಸಮ್ಮ, ನೀಲಮ್ಮ, ರಾಜಪ್ಪ, ಎಸ್.ಎನ್.ತಮ್ಮಯ್ಯಪ್ಪ, ಮರುಳಪ್ಪ, ಪಿಡಿಒ ನೇತ್ರಾವತಿ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಬಾಸೂರು, ಚಿಕ್ಕಬಾಸೂರು, ಗೌಡನಕಟ್ಟೆಹಳ್ಳಿ, ವಿ.ಸಿದ್ದರಹಳ್ಳಿ, ಲಕ್ಕಡಿಕೋಟೆ, ಬೋರನಹಳ್ಳಿ ಗ್ರಾಮಸ್ಥರು ಇದ್ದರು.