ಕನ್ನಡಶಾಲೆ ಮುಚ್ಚದಂತೆ ಸರ್ಕಾರಿ ಆದೇಶಕ್ಕೆ ಯತ್ನ: ಮಹೇಶ್ ಜೋಷಿ

KannadaprabhaNewsNetwork | Published : Dec 6, 2023 1:15 AM

ಸಾರಾಂಶ

ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಮೊದಲು ಉಳಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚದಂತೆ ಆದೇಶ ಹೊರಡಿಸಲು ರಾಜ್ಯ ಸರ್ಕಾರದ ಮೇಲೆ ಕರ್ನಾಟಕ ಸಾಹಿತ್ಯ ಪರಿಷತ್ತು ಒತ್ತಡ ಹೇರಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಟ

ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಮೊದಲು ಉಳಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚದಂತೆ ಆದೇಶ ಹೊರಡಿಸಲು ರಾಜ್ಯ ಸರ್ಕಾರದ ಮೇಲೆ ಕರ್ನಾಟಕ ಸಾಹಿತ್ಯ ಪರಿಷತ್ತು ಒತ್ತಡ ಹೇರಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

ಅವರು ಕೋಟ ವಿವೇಕ ವಿದ್ಯಾಲಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ - ಅನುಸಂಧಾನವನ್ನು ಉದ್ಘಾಟಿಸಿ ಮಾತನಾಡಿದರು. ಅಲ್ಲದೆ ನ್ಯಾಯಾಲಯಗಳಲ್ಲೂ ಕನ್ನಡದಲ್ಲೇ ತೀರ್ಪು ನೀಡುವಂತೆ ಸರ್ಕಾರದಿಂದ ಆದೇಶಿಸಲು ಕ.ಸಾ.ಪರಿಷತ್ತು ಪ್ರಯತ್ನ ನಡೆಸುತ್ತಿದೆ ಎಂದವರು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಶಿಕ್ಷಣ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಕನ್ನಡದ ಬಳಕೆ ಕಡಿಮೆಯಾಗಿದೆ. ಮನೆಯಲ್ಲಿ ಮಕ್ಕಳೊಂದಿಗೆ ಮಾತೃಭಾಷೆಯಲ್ಲಿ ಮಾತನಾಡಿದಲ್ಲಿ ಮಾತ್ರ ನಮ್ಮ ಭಾಷೆಯೊಂದಿಗೆ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.

ಹೊರನಾಡ ಕನ್ನಡಿಗ ಹಾಗೂ ವಿದ್ವಾಂಸ ಸಂಶೋಧಕ ಬಾಬು ಶಿವ ಪೂಜಾರಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

ಕೋಟ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತು ಉದ್ಯಮಿ ಆನಂದ ಸಿ. ಕುಂದರ್‌ ಪುಸ್ತಕ ಮಳಿಗೆಗೆ ಚಾಲನೆ ನೀಡಿದರು. ಕ.ಸಾ.ಪ. ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಹಿರಿಯ ಸಂಶೋಧಕ ಎ.ವಿ. ನಾವುಡ ನಿಕಟ ಪೂರ್ವ ಅದ್ಯಕ್ಷರ ಬಗ್ಗೆ ಮಾಹಿತಿ ನೀಡಿದರು.

ಕ.ಸಾ.ಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೋಟ ಪಿಯು ಪ್ರಾಂಶುಪಾಲ ಜಗದೀಶ ನಾವುಡ, ದ.ಕ. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕೋಟ ವಿದ್ಯಾ ಸಂಸ್ಥೆಯ ರಾಮದೇವ ಐತಾಳ ಮತ್ತು ಕ.ಸಾ.ಪದ ವಿವಿಧ ತಾಲೂಕುಗಳ ಅಧ್ಯಕ್ಷರು ಇದ್ದರು. ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸತೀಶ ವಡ್ಡರ್ಸೆ ವಂದಿಸಿದರು. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ನಿರೂಪಿಸಿದರು.

ನಂತರ ಕವಿಗೋಷ್ಠಿ, ಹ್ವಾಯ್ ಕುಂದಾಪ್ರ ಕನ್ನಡ ಭಾಷಿ ಅಲ್ಲ ಬದ್ಕ್, ಶತಮಾನದ ಅಚ್ಚರಿ, ಆಡಳಿತದಲ್ಲಿ ಕನ್ನಡ, ವಿಚಾರಗೋಷ್ಠಿಗಳು ನಡೆದವು. ಸುರಭಿ ಬೈಂದೂರು ಅವರಿಂದ ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ಜೋಮನ ದುಡಿ ನಾಟಕ ನಡೆಯಿತು.

ಇದಕ್ಕೆ ಮೊದಲು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ಮುಂಭಾಗದಲ್ಲಿ ಅಧ್ಯಕ್ಷರು, ಅತಿಥಿಗಣ್ಯರನ್ನೊಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಚಾಲನೆ ನೀಡಿದರು.

ವೇದಿಕೆಯ ಮುಂಭಾಗ ಬರುತ್ತಿದ್ದಂತೆ ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ ದಂಪತಿಯನ್ನು ಆರತಿ ಬೆಳಗಿ ವೀಳ್ಯ ನೀಡಿ ಸ್ವಾಗತಿಸಲಾಯಿತು.ಪುಸ್ತಕ ಬಿಡುಗಡೆ

ಇದೇ ಸಂದರ್ಭ ನೀಲಾವರ ಸುರೇಂದ್ರ ಅಡಿಗರ ಕಾವ್ಯ ಲೋಕ, ಹರ್ಷದ ಹೊನಲು, ಭೂತ ಜಾಲ, ಮೂರು ನೀಳ್ಗತೆಗಳು, ಸೂರಿಮಾಣಿ, ನಮ್ಮ ಪುಟ್ಟ, ಡಾ.ಭಾರತಿ ಮರವಂತೆ ಅವರ ಚಿತ್ತಾರ ಜಾನಪದ, ವಿಠಲ್ ಜಿ.ಪೂಜಾರಿ ಅವರ ಮಂದಾಕಿನಿ, ವಂದಗದ್ದೆ ಗಣೇಶ ಅವರ ಬಿ.ವಿ.ಕೆದ್ಲಾಯರ ಮಹಾತ್ಮರ ಬಾಳಿನ ಪುಟಗಳಿಂದ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

Share this article