ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತ 2,315 ರೋಗಿಗಳು । 439 ಕ್ಷಯ ರೋಗಿಗಳು ಪತ್ತೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಜಿಲ್ಲೆಯನ್ನು 2025ರ ವೇಳೆಗೆ ಕ್ಷಯರೋಗ ಮುಕ್ತ ಮಾಡುವ ಗುರಿ ಹೊಂದಲಾಗಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಹೇಳಿದರು. ಬುಧವಾರ ಪ್ರೆಸ್‌ಕ್ಲಬ್ ನಲ್ಲಿ ಆರೋಗ್ಯ ಇಲಾಖೆ ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಯೋಜನೆ ಅಡಿ ಇಲಾಖೆ ಸಿಬ್ಬಂದಿ ತಾಲೂಕುವಾರು ತಪಾಸಣೆ ನಡೆಸಿ ಜಿಲ್ಲೆಯಲ್ಲಿ ಒಟ್ಟು 439 ಮಂದಿ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ 144, ಕಡೂರು 122, ತರೀಕೆರೆ, ಅಜ್ಜಂಪುರ ಸೇರಿ 77, ಮೂಡಿಗೆರೆ, ಕಳಸ 38, ಕೊಪ್ಪ 22, ಎನ್.ಆರ್.ಪುರ 30 ಹಾಗೂ ಶೃಂಗೇರಿಯಲ್ಲಿ 6 ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತ 2,315 ರೋಗಿಗಳಿದ್ದು ಎಆರ್‌ಟಿ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಪ್ತ ಸಮಾಲೋಚನೆ ನಡೆಸಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ 728, ತರೀಕೆರೆ 442, ಕಡೂರು 630, ಮೂಡಿಗೆರೆ 237, ಎನ್ಆರ್ ಪುರ 106, ಕೊಪ್ಪ 136, ಶೃಂಗೇರಿ 36, ಎಚ್ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಅನುಷ್ಠಾನ 2003 ರಿಂದ ಜಾರಿಯಲ್ಲಿದ್ದು ಈ ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದರು. 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಮಾರಾಟ ಮಾಡುವಂತಿಲ್ಲ. ಶಿಕ್ಷಣ ಸಂಸ್ಥೆಗಳ 100 ಮೀಟರ್ ಅಂತರದೊಳಗೆ ಬೀಡಿ, ಸಿಗರೇಟ್ ,ಗುಟ್ಕಾ ಮುಂತಾದ ತಂಬಾಕು ಉತ್ಪನ್ನ ಮಾರಾಟ ಮಾಡಲು ಅವಕಾಶ ಇಲ್ಲ ಗ್ರಾಮದಲ್ಲಿ ತಂಬಾಕು ಸೇವನೆ ಮಾಡದಂತೆ ಮನವೊಲಿಸಿ ಬಿಡಿಸುವ ಕುರಿತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಮಗಳಲ್ಲಿ ತಂಬಾಕು ಮಾರಾಟ ನಿಷೇಧ ಮಾಡಲು ಕ್ರಮವಹಿಸ ಲಾಗುತ್ತಿದೆ ಎಂದು ತಿಳಿಸಿದರು. ತಂಬಾಕು ಬೆಳೆಯುತ್ತಿರುವ ರೈತರ ಮನವೊಲಿಸಿ ಪರ್ಯಾಯ ಬೆಳೆ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಲು ಉತ್ತೇಜನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಶೇ. 100ರಷ್ಟು ತಂಬಾಕು ನಿಷೇಧಕ್ಕೆ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಹೇಳಿದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ 5 ಲಕ್ಷ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 2 ಲಕ್ಷ ರು. ಆರೋಗ್ಯ ವಿಮೆ ಜಾರಿಯಲ್ಲಿದ್ದು ಪಡಿತರ ಚೀಟಿ ಆಧಾರ್ ಕಾರ್ಡ್ ನ್ನು ದಾಖಲೆಯಾಗಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರದಲ್ಲಿ ನೋಂದಾಯಿಸಬಹುದಾಗಿದೆ ಎಂದರು. ರಸ್ತೆ ಅಪಘಾತ, ಹೃದಯಾಘಾತ ಮುಂತಾದ ತೊಂದರೆಗಳಿಗೆ ಒಳಗಾದವರು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಈಗಾಗಲೇ 10 ಲಕ್ಷ ಕಾರ್ಡ್ ವಿತರಣೆಗೆ ಗುರಿ ಹೊಂದಿದ್ದು 7 ಲಕ್ಷ ಕಾರ್ಡ್ ವಿತರಿಸಲಾಗಿದೆ. ನಗರದಲ್ಲಿ ಆಶ್ರಯ ಆಸ್ಪತ್ರೆ, ಕೆಆರ್ ಎಸ್ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡುದಾರರಿಗೆ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಅ. 10ರ ವರೆಗೆ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು 187 ಡೆಂಗ್ಯೂ ಪ್ರಕರಣ, ಚಿಕನ್ ಗುನ್ಯಾ 1, ಚಿಕ್ಕಮಗಳೂರು, ಮೂಡಿಗೆರೆ, ಕಡೂರಿನಲ್ಲಿ ಮಲೇರಿಯಾ ತಲಾ ಒಂದು ಪ್ರಕರಣ ಪತ್ತೆಯಾಗಿದ್ದು ಯಾವುದೇ ಸಾವುಗಳು ಆಗಿರುವ ವರದಿ ಆಗಿಲ್ಲ ಎಂದು ಹೇಳಿದರು. ಪ್ರತಿ ವರ್ಷ ಆರೋಗ್ಯ ಇಲಾಖೆ ಸೇವೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಲಭ್ಯವಾಗಬೇಕೆಂಬ ದೃಷ್ಟಿ ಯಿಂದ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ ಆರ್ ಸಿ ಎಚ್ ಕಾರ್ಯಕ್ರಮದಡಿ ತಾಯಿ ಮಗು ಆರೋಗ್ಯಕ್ಕೆ ಸಂಬಂಧಿಸಿದ 36 ವಿವಿಧ ರೀತಿಯ ರೋಗಗಳಿಗೆ ದಾಖಲಿಸಲಾಗುತ್ತಿದೆ ಎಂದು ಹೇಳಿದರು ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರಿಗೆ ನೋಸ್ಕಾಲ್ ವ್ಯಾಸಟ್ಕಮಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ, ಮಹಿಳೆಯರಿಗೆ ಉದರ ದರ್ಶಕ ಹರಣ ಶಸ್ತ್ರ ಚಿಕಿತ್ಸೆ, ಟ್ಯೂ ಬೆಕ್ಟಮಿ ಅಂತರ ವಿಧಾನ ಪಿಪಿಐಯುಸಿಡಿ, ಐಯುಸಿಡಿ ಮಹಿಳೆಯರಿಗೆ ನುಂಗುವ ಮಾತ್ರೆ ಮಾಲಾ ಎನ್ ಛಾಯಾ ಮಾತ್ರೆ ವಾರಕ್ಕೊಮ್ಮೆ ಮೂರು ತಿಂಗಳಿಗೊಮ್ಮೆ ಅಂತರ ಚುಚ್ಚುಮದ್ದು ಪುರುಷರಿಗೆ ನಿರೋಧ್ ನೀಡಲಾಗುವುದು ಎಂದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಶಶಿಕಲಾ, ಡಾ. ಬಾಲಕೃಷ್ಣ, ಡಾ. ಭರತ್‌ಕುಮಾರ್, ಡಾ. ಸೀಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಲಲಿತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ಉಪಸ್ಥಿತರಿದ್ದರು. 11 ಕೆಸಿಕೆಎಂ 1 ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ಆರೋಗ್ಯ ಇಲಾಖೆ ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ಉದ್ಘಾಟಿಸಿದರು. ಡಾ. ಅಶ್ವತ್‌ಬಾಬು, ಡಾ. ಭರತ್‌ಕುಮಾರ್, ಡಾ. ಸೀಮಾ ಇದ್ದರು.