ಗಡ್ಡೆ-ಗೆಣಸುಗಳು ಅನ್ನ ಸಂಸ್ಕೃತಿಯ ರಾಯಭಾರಿ: ಡಾ. ಎಚ್.ಪಿ. ಮಹೇಶ್ವರಪ್ಪ

KannadaprabhaNewsNetwork |  
Published : Feb 18, 2024, 01:30 AM IST
17ಡಿಡಬ್ಲೂಡಿ7ಸಹಜ ಸಮೃದ್ಧ ಮತ್ತು ನೇಚರ್ ಫಸ್ಟ್ ಗಾರ್ಡನ್ ಸಿಟಿ ಆಶ್ರಯದಲ್ಲಿ ಧಾರವಾಡದಲ್ಲಿ ಆರಂಭವಾದ ಎರಡು ದಿನಗಳ ಗೆಡ್ಡೆ ಗೆಣಸುಗಳ ಮೇಳದಲ್ಲಿ ಗಮನ ಸೆಳೆದ ಗೆಡ್ಡೆ ಗೆಣಸುಗಳು.. | Kannada Prabha

ಸಾರಾಂಶ

ನೈಸರ್ಗಿಕ ವಿಕೋಪ ಮತ್ತು ಬರಗಾಲದಲ್ಲಿ ಗಡ್ಡೆ ಗೆಣಸು ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತವೆ ಎಂದು ಡಾ. ಎಚ್.ಪಿ. ಮಹೇಶ್ವರಪ್ಪ ಹೇಳಿದರು.

ಧಾರವಾಡ: ಗಡ್ಡೆ ಗೆಣಸುಗಳು ನಿಸರ್ಗದ ಅಮೂಲ್ಯ ಸಂಪತ್ತು. ಅನ್ನ ಸಂಸ್ಕೃತಿಯ ರಾಯಭಾರಿ. ಅದನ್ನು ಸಂರಕ್ಷಿಸದ ಹೊರತೂ ಭವಿಷ್ಯವಿಲ್ಲ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎಚ್.ಪಿ. ಮಹೇಶ್ವರಪ್ಪ ಆಭಿಪ್ರಾಯಪಟ್ಟರು.

ಸಹಜ ಸಮೃದ್ಧ ಮತ್ತು ನೇಚರ್ ಫಸ್ಟ್ ಗಾರ್ಡನ್ ಸಿಟಿ ಆಶ್ರಯದಲ್ಲಿ ಕೋರ್ಟ ಸರ್ಕಲ್ ಸಮೀಪದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಆರಂಭವಾದ ಎರಡು ದಿನಗಳ ಗಡ್ಡೆ ಗೆಣಸುಗಳ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ನೈಸರ್ಗಿಕ ವಿಕೋಪ ಮತ್ತು ಬರಗಾಲದಲ್ಲಿ ಗಡ್ಡೆ ಗೆಣಸು ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ವಾತಾವರಣದ ವೈಪರೀತ್ಯವಿದ್ದಾಗ ಎಲ್ಲ ಬೆಳೆಗಳು ವಿಫಲವಾದಾಗ ಗಡ್ಡೆ ಗೆಣಸುಗಳು ರೈತನ ಕೈಹಿಡಿದು, ಆದಾಯ ತರುತ್ತವೆ. ಇಂಥ ಗಡ್ಡೆ ಗೆಣಸು ನಮ್ಮ ಕೃಷಿಯ ಭಾಗವಾಗಬೇಕು ಪ್ರಕೃತಿಯ ಕೊಡುಗೆಯಾದ ಗಡ್ಡೆ ಗೆಣಸು ಗ್ರಾಹಕರ ಹಿತ ಕಾಯುತ್ತವೆ ಎಂದು ತಿಳಿಸಿದರು.

‘ನಿರ್ಲಕ್ಷಿತ ಬೆಳೆಗಳ ಕ್ಯಾಲೆಂಡರ್ 2024’ ಬಿಡುಗಡೆ ಮಾಡಿ ಮಾತನಾಡಿದ ತೋಟಗಾರಿಕೆ ವಿಜ್ಞಾನಗಳ ವಿವಿ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷಣ ಕುಕನೂರು ಮಾತನಾಡಿ, ಮಳೆಯ ಏರುಪೇರು ರೈತರನ್ನು ಕಂಗೆಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಆಹಾರ ಸಮಸ್ಯೆಗಳಿಗೆ ಸಾಂಪ್ರದಾಯಿಕ ಬೆಳೆಗಳು ಪರಿಹಾರವಾಗಬಲ್ಲವು. ನುಗ್ಗೆ, ಸೋರೆ, ದಂಟು ಸೊಪ್ಪಿನಂತ ತರಕಾರಿಗಳು, ಸುಂಡೇಕಾಯಿಯಂತ ಸಾಗುವಳಿ ಮಾಡದ ಬೆಳೆಗಳು, ಹಲಸು, ನೇರಳೆಯಂತ ಹಣ್ಣುಗಳು, ಗಡ್ಡೆ ಗೆಣಸು ಬೆಳೆಗಳು ಕಡಿಮೆ ನೀರನಲ್ಲಿ, ಹೆಚ್ಚು ಆರೈಕೆ ಕೇಳದೆ ಬೆಳೆಯುವ ಸಾಮರ್ಥ್ಯ ಪಡೆದಿವೆ. ಇವುಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕಿದೆ ಎಂದರು.

ಗಡ್ಡೆ ಗೆಣಸು ಸಮನ್ವಯ ಸಂಶೋಧನಾ ಯೋಜನೆಯ ಪ್ರಧಾನ ಸಂಶೋಧಕ ಡಾ. ಇಮಾಮಸಾಹೇಬ ಜತ್ತ, ಗಡ್ಡೆ ಗೆಣಸುಗಳು ಪ್ರಕೃತಿಯ ಅಮೂಲ್ಯ ಕೊಡುಗೆ. ಹಳದಿ ಮತ್ತು ನೇರಳೆ ಸಿಹಿ ಗೆಣಸು, ಕೂವೆ ಗೆಣಸು, ಮರ ಗೆಣಸು, ಸುವರ್ಣ ಗಡ್ಡೆಗಳು ಧಾರವಾಡದ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತವೆ. ಇಂಥ ಗಡ್ಡೆ ಗೆಣಸುಗಳನ್ನು ವ್ಯವಸಾಯದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಪೂರ್ವಿಕರ ಆಹಾರವಾಗಿದ್ದ, ಪೋಷಕಾಂಶಗಳಿಂದ ಸಮೃದ್ದವಾದ ನೈಸರ್ಗಿಕ ಗಡ್ಡೆ ಗೆಣಸುಗಳನ್ನು ಮತ್ತೆ ನಮ್ಮ ಅನ್ನದ ತಟ್ಟೆಗೆ ಬರಮಾಡಿಕೊಳ್ಳಬೇಕು. ಗಡ್ಡೆ ಗೆಣಸುಗಳನ್ನು ನಿರಂತರವಾಗಿ ಬಳಸುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.

ಸಹಜ ಸಮೃದ್ಧದ ಶಾಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ಹಂಚಿನಾಳ ಸ್ವಾಗತಿಸಿದರು. ಪಂಚಾಕ್ಷರಿ ಹಿರೇಮಠ, ಕಮಲಮ್ಮ ಕಾನಣ್ಣನವರ್ ಇದ್ದರು. ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ರೈತರ ಗುಂಪುಗಳು ಬಗೆ ಬಗೆಯ ಗಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ತಂದಿದ್ದವು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ