ಕಾಂಗ್ರೆಸ್ ಸರ್ಕಾರದಿಂದ ತುಘಲಕ್ ದರ್ಬಾರ್: ಅಶ್ವತ್ಥನಾರಾಯಣ

KannadaprabhaNewsNetwork |  
Published : Nov 10, 2024, 01:39 AM IST
 ಬಿಜೆಪಿ ರಾಜ್ಯ ವಕ್ತಾರ | Kannada Prabha

ಸಾರಾಂಶ

ವಿಜಯಪುರ, ಬೆಂಗಳೂರಿನಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ವಕ್ಪ್ ಆಸ್ತಿಗಳನ್ನು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಹ್ಯಾರಿಸ್ ಸೇರಿದಂತೆ ಹಲವು ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ತೆರವುಗೊಳಿಸಿ ಅದನ್ನು ಮೊದಲು ವಶಕ್ಕೆ ತೆಗೆದುಕೊಳ್ಳಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತುಘಲಕ್ ದರ್ಬಾರು ಮಾಡುತ್ತಿದೆ. ವಾಲ್ಮೀಕಿ ನಿಗಮ, ಮುಡಾ ಸೇರಿದಂತೆ ಹಲವು ಲೂಟಿ ಪ್ರಕರಣಗಳು ಹೆಚ್ಚಾಗಿವೆ. ಈಗ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಆರೋಪಿಸಿದರು.

ತಾಲೂಕಿನ ಹೊಳಲು ಗ್ರಾಮದ ಚಿತ್ತನಾಳಮ್ಮ ದೇವಾಲಯ ಲೋಕಾರ್ಪಣೆ ಕಾರ್‍ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಕ್ಫ್ ಆಸ್ತಿಯನ್ನು ಬಹುತೇಕ ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿಕೊಂಡಿದ್ದಾರೆ. ಮೊದಲು ಅದನ್ನು ತೆರವು ಮಾಡಲಿ ಎಂದು ಸವಾಲು ಹಾಕಿದರು.

ವಿಜಯಪುರ, ಬೆಂಗಳೂರಿನಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ವಕ್ಪ್ ಆಸ್ತಿಗಳನ್ನು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಹ್ಯಾರಿಸ್ ಸೇರಿದಂತೆ ಹಲವು ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ತೆರವುಗೊಳಿಸಿ ಅದನ್ನು ಮೊದಲು ವಶಕ್ಕೆ ತೆಗೆದುಕೊಳ್ಳಲಿ ಎಂದು ವಕ್ಫ್ ಮಂಡಳಿಯನ್ನು ಒತ್ತಾಯಿಸಿದರು.

ಐಎಎಸ್ ಅಧಿಕಾರಿಗಳಾದ ಪಿ.ಸಿ.ಜಾಫರ್, ಅತೀಕ್ ಅಹಮದ್ ಸೇರಿದಂತೆ ಕೆಲವರು ಬೇರೆ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ವೇಳೆ ರೈತರ ಜಮೀನನ್ನು ವಕ್ಫ್‌ಗೆ ಬರೆದಿದ್ದಾರೆ. ಕೇವಲ ನೋಟಿಸ್ ವಾಪಸ್ಸು ಪಡೆಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ 1979 ವಕ್ಫ್ ಮಂಡಳಿ ಘೋಷಣೆ ಮಾಡಿರುವ ಗೆಜೆಟ್ ನೋಟಿಫಿಕೇಷನ್ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.

ಖಜಾನೆ ಖಾಲಿ:

ಕಳೆದ ಆರೇಳು ತಿಂಗಳುಗಳಿಂದ ಖಜಾನೆ ಖಾಲಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಒಂದೂವರೆ ಲಕ್ಷ ಕೋಟಿ ಸಾಲ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಈಗಾಗಲೇ 75.70 ಕೋಟಿ ಸಾಲ ಇದೆ. ಸಿದ್ದರಾಮಯ್ಯನವರಿಗೆ ಪ್ಲಾನಿಂಗ್ ಇಲ್ಲ. ಕಳೆದ ವರ್ಷ 38 ಸಾವಿರ ಕೋಟಿ ಗ್ಯಾರೆಂಟಿ ಯೋಜನೆಗಳಿಗೆ ಕೊಟ್ಟಿದ್ದಾರೆ. ಅರ್ಧ ವರ್ಷ ಆಗಿದೆ. ಈ ವರ್ಷ 58 ಸಾವಿರ ಕೋಟಿ ಬೇಕಾಗಿದೆ. ಇದಕ್ಕೆ ಯಾವ ರೀತಿ ಹಣ ಹೊಂದಿಸುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳು ಸೇರಿದಂತೆ ಆದಾಯ ಮೂಲ ಹೇಗಿದೆ ಎಂಬುದು ಸ್ಪಷ್ಟವಾಗಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ