ಕುರುಗೋಡು: ವಾಲ್ಮೀಕಿ ಅಭಿವೃದ್ಧಿ ನಿಗಮದ ₹೧೮೭ ಕೋಟಿ ದುರ್ಬಳಕೆ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಹಂಚಿ ಜಯ ಗಳಿಸಿರುವ ತುಕಾರಾಂ ಸಂಸದ ಸ್ಥಾನ ಕಳೆದುಕೊಳ್ಳುವುದು ಖಚಿತ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಈ.ತುಕಾರಾಂ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಜಿಲ್ಲಾ ಖನಿಜ ನಿಧಿಯಲ್ಲಿ ಸಿಂಹಪಾಲು ಸಂಡೂರು ತಾಲೂಕಿಗೆ ದೊರೆತರೂ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಗ್ರಾಮದಲ್ಲಿನ ರಸ್ತೆಗಳು ಉತ್ತಮ ನಿರ್ದಶನ ಎಂದರು. ಸಂಡೂರು ತಾಲೂಕಿನಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ತುಕಾರಾಂ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಕ್ಷೇತ್ರವನ್ನು ಇಲ್ಲಿನ ಗಣಿಗಾರಿಕೆಯಿಂದ ಸಂಗ್ರಹವಾಗುವ ಡಿಎಂಎಫ್, ಕೆಎಂಇಆರ್‌ಸಿ ಫಂಡ್ಸ್, ಕೈಗಾರಿಗೆಗಳ ಲಾಭದಲ್ಲಿ ನೀಡುವ ಸಿಎಸ್ಆರ್ ಫಂಡ್ಸ್‌ಗಳಿಂದ ಸಾವಿರಾರು ಕೋಟಿ ಇದೆ. ಆದರೆ ಕಾಂಗ್ರೆಸ್‌ನವರು ಈ ಹಣವನ್ನು ಸರಿಯಾಗಿ ಬಳಕೆ ಮಾಡದೇ ಜನತೆಗೆ ಅನ್ಯಾಯ ಮಾಡಿದ್ದಾರೆ. ಅಂತವರಿಗೆ ಈ ಬಾರಿಯ ಉಪಚುನಾವಣೆಯಲ್ಲಿ ಮತ ನೀಡದೇ ತಕ್ಕಪಾಠ ಕಲಿಸಬೇಕು ಎಂದು ಆರೋಪಿಸಿದರು.ನನಗೆ ಸಿಎಂ ಸಿದ್ದರಾಮಯ್ಯ ಮೇಲೆ ಕೊಪವಿಲ್ಲ. ವೈಯಕ್ತಿಕ ದ್ವೇಷವಿಲ್ಲ. ನಾನು ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಕ್ಕೆ ಈ ಜನ್ಮದಲ್ಲಿ ಸಿದ್ದರಾಮಯ್ಯ ರೂಪದಲ್ಲಿ ನನಗೆ ತೊಂದರೆ ಕೊಡಬೇಕೆಂದು ಭಗವಂತ ಬರೆದಿದ್ದ ಅಂದುಕೊಂಡು ಸರಿಮಾಡಿಕೊಂಡಿದ್ದೇನೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಬಿಟ್ಟಿ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರನ್ನು ಸೋಮಾರಿಗಳನ್ನಾಗಿ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಈ ಭಾಗದಲ್ಲಿ ಇನ್ನು ಬೃಹತ್ ಕೈಗಾರಿಕೆಗಳು ಬರಬೇಕು. ಗ್ರಾಮೀಣ ಭಾಗದ ವಿದ್ಯಾವಂತ ಯುವಕರಿಗೆ ಉದ್ಯೋಗ ದೊರೆಯಬೇಕು ಎನ್ನುವ ಕನಸು ಹೊಂದಿದ್ದೇನೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಬಂಗಾರು ಹನುಮಂತು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸುಕಂಡಿರುವ ನನಗೆ ಮತ ನೀಡಿ ಎಂದು ಮನವಿ ಮಾಡಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲಕುಮಾರ್ ಮೋಕಾ, ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ ಮತ್ತು ಐಯಾಳಿ ತಿಮ್ಮಪ್ಪ ಮಾತನಾಡಿದರು.
ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಮುಖಂಡರಾದ ಅಂಬಣ್ಣ, ಶಂಕರ್ ದಾಸ್, ಬಿಜೆಪಿ ಮಂಡಲ ಅಧ್ಯಕ್ಷ ನಾನಾಸಾಬ್ ನಿಕ್ಕೀ, ಕೆ.ನಾಗಪ್ಪ, ಕೆ.ಗೊಂದೆಪ್ಪ, ಮುದ್ದೆ ಹೊನ್ನೂರಪ್ಪ ಸ್ವಾಮಿ, ಪೂಜಾರಿ ಚಿದಾನಂದ ಮತ್ತು ಹೇಮಯ್ಯ ಹೇಮಚಂದ್ರ ದಾಸ್, ಮಲ್ಲಮ್ಮಗುರುಮೂರ್ತಿ, ಪೂಜಾರಿ ಚಿದಾನಂದ, ಎನ್.ಈರಣ್ಣ, ಗುರುಕೇರಿ ದೊಡ್ಡಬಸಪ್ಪ, ತಮ್ಮನಗೌಡ, ಪರಶುರಾಮ, ತಿಪ್ಪಸ್ವಾಮಿ ಇದ್ದರು.