ಮಂಗಳೂರು: ತುಳುವಿನ ಮೊದಲ ಪ್ರಕಟಿತ ನಾಟಕ ಕೃತಿ ‘ಜನ ಮರ್ಲ್’ ನಾಟಕದ ಲೇಖಕ ಮಾಧವ ತಿಂಗಳಾಯರು 30 ನಾಟಕಗಳನ್ನು ಬರೆದು ಸಾಹಿತ್ಯ ಜೊತೆಗೆ ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಸುಧಾರಣೆಗೂ ಅನನ್ಯ ಸೇವೆ ಸಲ್ಲಿಸಿದವರು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಆಯೋಜಿಸಿದ ಮಾಧವ ತಿಂಗಳಾಯರ 113ನೇ ಜನ್ಮದಿನಾಚರಣೆಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಂಗ ನಿರ್ದೇಶಕರಾದ ಜಗನ್ ಪವಾರ್ ಬೇಕಲ್ ಮಾತನಾಡಿ, ಮಾಧವ ತಿಂಗಳಾಯರ ಮಾವ, ಅಜ್ಜ ಸೇರಿದಂತೆ ಪೂರ್ತಿ ಕುಟುಂಬ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದು ನೆನಪಿಸಿದರು.
ಹಿರಿಯ ರಂಗ ನಿರ್ದೇಶಕ ತಮ್ಮ ಲಕ್ಷ್ಮಣ ಮಾತನಾಡಿ, ತುಳು ನಾಟಕದ ಆದ್ಯ ಪ್ರವರ್ತಕರಾದ ಮಾಧವ ತಿಂಗಳಾಯರ ನೆನಪಿನಲ್ಲಿ ತುಳು ರಂಗಭೂಮಿ ದಿನಾಚರಣೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದರು.ತಿಂಗಳಾಯರ ಕುಟುಂಬಸ್ಥರಾದ ಪ್ರೇಮಚಂದ್ರ ತಿಂಗಳಾಯ ಭಾಗವಹಿಸಿ ಮಾಧವ ತಿಂಗಳಾಯರ ಸಾಮಾಜಿಕ ಮತ್ತು ಸಾಹಿತ್ಯಿಕ ಕೆಲಸಗಳನ್ನು ಸ್ಮರಿಸಿದರು.
ಉಪನ್ಯಾಸಕ ರಘು ಇಡ್ಕಿದು ವಂದಿಸಿದರು.