ಕನ್ನಡಪ್ರಭ ವಾರ್ತೆ ಪುತ್ತೂರು
ಮಹಿಳಾ ಪ್ರಧಾನ ಕಥೆಯಾಧಾರಿತವಾಗಿ ನಿರ್ಮಾಣಗೊಂಡಿರುವ ತುಳು ಚಿತ್ರ ರಂಗದ ಬಹು ನಿರೀಕ್ಷಿತ ‘ಮೀರಾ’ ಚಿತ್ರ ಶುಕ್ರವಾರ ಕರಾವಳಿಯ ೧೬ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಿದೆ ಎಂದು ಚಿತ್ರ ನಿರ್ದೇಶಕ ಲಂಚುಲಾಲ್ ಕೆ.ಎಸ್. ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಲನಚಿತ್ರದಲ್ಲಿ ಮಹಿಳಾ ಜೀವನ ಸಾಧಕಿಯ ಕಥೆ ಆಧರಿಸಿ ನಿರ್ಮಾಣಗೊಂಡಿದೆ. ಮಂಗಳೂರಿನಲ್ಲಿ ಈಗಾಗಲೇ ಈ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಚಿತ್ರ ಪ್ರೇಕ್ಷಕರಿಂದ ಚಿತ್ರದ ಪರವಾಗಿ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ ಎಂದರು.ಪ್ರೀಮಿಯರ್ ಶೋನಲ್ಲಿ ರು. ೧ ಕೋಟಿ ಕಲೆಕ್ಷನ್ ಗಳಿಸಿ ಹೊಸ ದಾಖಲೆ ಬರೆದಿದೆ. ಪುಷ್ಪ ೨ ಚಿತ್ರದಲ್ಲಿ ಅಸಿಸ್ಟೆಂಟ್ ಕ್ಯಾಮಾರಾಮ್ಯಾನ್ ಆಗಿದ್ದ ಅಜಯ್ ಈ ಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಸಿನಿಮಾಗಳಿಗೆ ಕಲರಿಂಗ್ ಮಾಡುವ ರಿಜು ಈ ಸಿನಿಮಾದಲ್ಲಿ ಸಿನಿಮಾ ದೃಶ್ಯಗಳ ಕಲರಿಂಗ್‌ನ್ನು ಮಾಡಿದ್ದಾರೆ. ಕೇರಳ, ಮಂಗಳೂರು, ಉಡುಪಿಗಳಲ್ಲಿ ಚಿತ್ರೀಕರಣಗೊಂಡಿದೆ. ಒಟ್ಟು ನಾಲ್ಕು ಚಿತ್ರಗಳು ನಿರ್ಮಾಣಗೊಳ್ಳುತ್ತಿದ್ದು ಒಂದು ಚಿತ್ರ ಬಿಡುಗಡೆಗೊಳ್ಳುವ ಜೊತೆಗೆ ಇನ್ನೂ ಮೂರು ಚಿತ್ರ ನಿರ್ಮಾಣವಾಗುತ್ತಿದೆ. ರಂಗದಲ್ಲಿ ಹಂತ ಹಂತವಾಗಿ ಬದಲಾವಣೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ನಿರ್ದೇಶಕ ಅಶ್ವಥ್ ಮಾತನಾಡಿ ಮೀರಾ ಚಿತ್ರ ಪ್ರಿಮಿಯರ್ ಶೋ ನಡೆದಿದ್ದು ಉತ್ತಮ ಪ್ರಶಂಸೆ ದೊರೆತಿದೆ. ತುಳು ಚಿತ್ರರಂಗದಲ್ಲಿ ಹೊಸತನದಲ್ಲಿ ಉತ್ತಮ ಚಿತ್ರ ನೀಡುವ ಪ್ರಯತ್ನ ಮಾಡಿದ್ದೇವೆ. ಈ ಚಿತ್ರ ಮೂಲಕ ತುಳು ಚಿತ್ರ ರಂಗದಲ್ಲಿ ಬದಲಾವಣೆ ತರುವ ಪ್ರಯತ್ನವಾಗಿದೆ. ಪ್ರಥಮ ಬಾರಿಗೆ ಎಐ ಹಾಡು ತರಲಾಗಿದೆ. ರೇಜ್ಜು ಜಯಪ್ರಕಾಶ್ ಸಂಗೀತ ನೀಡಿದ್ದಾರೆ. ಕೇರಳದಲ್ಲಿ ಪ್ರಥಮವಾಗಿ ಶಾರ್ಟ್ ಮೂವಿ ಮಾಡಿದ್ದು ಅದರ ಮುಂದುವರಿದ ಭಾಗವಾಗಿ ಮೀರಾ ಚಿತ್ರ ನಿರ್ಮಾಣಗೊಂಡಿದೆ ಎಂದರು.ನಟ ಯತೀಶ್ ಪೂಜಾರಿ ಮಾತನಾಡಿ, ಖ್ಯಾತ ಗಾಯಕ ಮಧು ಬಾಲಕೃಷ್ಣನ್ ಈ ಚಿತ್ರಕ್ಕೆ ಸ್ವರ ನೀಡಿದ್ದಾರೆ. ಕನ್ನಡ ರಾಪ್ ಗಾಯಕ ಆಲ್ ಒಕೆ ಈ ಸಿನಿಮಾದಲ್ಲಿ ಹಾಡುವ ಮೂಲಕ ಪ್ರಥಮ ಬಾರಿಗೆ ತುಳು ಚಿತ್ರದಲ್ಲಿ ಗಾಯಕರಾಗಿರುವುದು ಈ ಚಿತ್ರ ಮತ್ತೋದು ವಿಶೇಷತೆಯಾಗಿದೆ. ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು, ರೇಜ್ಜು ಜಯಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ಇಶಿಕಾ ಶೆಟ್ಟಿ ನಟಿಸಿದ್ದಾರೆ. ಅರವಿಂದ ಬೋಳಾರ್, ಜೆ.ಪಿ ತೂಮಿನಾಡು, ದೀಪಕ್ ರೈ ಪಾಣಾಜೆ, ಲಕ್ಷ್ಯಾ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಚಲನ ಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ಉಪಸ್ಥಿತರಿದ್ದರು.