- 13,562 ಮತದಾರರಲ್ಲಿ 12,111 ಮಂದಿ ಮತ ಚಲಾವಣೆ । ಶೇ.89.30 ಮತದಾನ: ಚುನಾವಣಾಧಿಕಾರಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದಲ್ಲಿರುವ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಭಾನುವಾರ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಬಿರುಸಿನಿಂದ ನಡೆಯಿತು.ಸಂಸ್ಥೆಯ 13,562 ಷೇರುದಾರ ಮತದಾರರಿದ್ದು, ಇವರಲ್ಲಿ 12,111 ಮತದಾರರು ಮತ ಚಲಾವಣೆ ಮಾಡಿದ್ದು, ಶೇ.89.30ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಎಸ್.ಮಂಜುಳ ತಿಳಿಸಿದ್ದಾರೆ.
ಪಟ್ಟಣದ ಹೊರವಲಯದ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್‌ನಲ್ಲಿ ಚುನಾವಣಾ ಮತಗಟ್ಟೆಗಳನ್ನು ಸ್ಥಾಪಿಸಿದ್ದು ಮತದಾನ ಮಾಡಲು ಬರುತ್ತಿದ್ದ ಮತದಾರರಿಗೆ ಸುಗಮವಾಗಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿತ್ತು.ಪಟ್ಟಣದ ಶ್ರೀ ತರಳಬಾಳು ವೃತ್ತ ಕೈಮಾರದಿಂದಲೇ ಎರಡು ಟೀಂಗಳ ಬೆಂಬಲಿಗರು ಆಯಾ ಟೀಂನ ನಾಯಕರ ಹೆಸರುಗಳನ್ನು ಕೂಗುತ್ತಿದ್ದರು. ಅಲ್ಲಿಂದ ಮತದಾನ ಕೇಂದ್ರದ ತನಕ 1 ಕಿಲೋಮೀಟರ್ ಉದ್ದಕ್ಕೂ ಜನರು ಪ್ರವೇಶಿಸದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಈ ತುಮ್ಕೋಸ್ ಸಂಸ್ಥೆಯಲ್ಲಿ ಚನ್ನಗಿರಿ ತಾಲೂಕು ಸೇರಿದಂತೆ ತರೀಕೆರೆ, ಅಜ್ಜಂಪುರ, ಭದ್ರಾವತಿ, ದಾವಣಗೆರೆ ಗ್ರಾಮಾಂತರ, ಹೊಳಲ್ಕೆರೆ, ಹೊನ್ನಾಳಿ ಈ ಪ್ರದೇಶಗಳಲ್ಲಿ ಮತದಾರರುಗಳಿದ್ದು, ತಮ್ಮ ಮತಗಳನ್ನು ಚಲಾಯಿಸಿದರು. ಮತದಾನ ಮಾಡಲು ಬರುತ್ತಿದ್ದ ಷೇರುದಾರ ಮತದಾರರಿಗೆ ಎರಡು ಟೀಂಗಳ ನಾಯಕರಾದ ಆರ್.ಎಂ.ರವಿ, ಎಚ್.ಎಸ್.ಶಿವಕುಮಾರ್ ಮತದಾರರಿಗೆ ನಮಿಸುತ್ತಾ ಮತದಾನ ಕೇಂದ್ರಕ್ಕೆ ಕಳಿಸುತ್ತಿದ್ದರು.33 ಅಭ್ಯರ್ಥಿಗಳು ಸ್ಪರ್ಧೆ:
ಮತದಾರರಿಗೆ ಅನುಕೂಲವಾಗುವ ಉದ್ದೇಶದಿಂದ 52 ಸಾಮಾನ್ಯ ಮತಗಟ್ಟೆಗಳು, ವಿಕಲಚೇತನರಿಗೆ, ಹಿರಿಯ ನಾಗರೀಕರಿಗೆ 2 ಮತಗಟ್ಟೆಗಳು ಸೇರಿದಂತೆ ಒಟ್ಟು 54 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಚುನಾವಣೆಯಲ್ಲಿ 15 ಜನರ ತಂಡವು ಆರ್.ಎಂ.ರವಿ ಟೀಮಿನಲ್ಲಿದ್ದರೆ, ಎಚ್.ಎಸ್.ಶಿವಕುಮಾರ್ ತಂಡದಲ್ಲಿ 15 ಜನರಿದ್ದಾರೆ. ಈ ಎರಡು ಗುಂಪುಗಳನ್ನು ಹೊರತುಪಡಿಸಿ ಮೂರು ಜನರು ಚುನಾವಣಾ ಕಣದಲ್ಲಿದ್ದು, 15 ನಿರ್ದೇಶಕರ ಆಯ್ಕೆಗೆ 33 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.ಭರ್ಜರಿ ಪ್ರಚಾರ:
ಕಳೆದ 15 ದಿನಗಳಿಂದ ಈ ಎರಡು ಟೀಂನ ನಾಯಕರಾದ ಎಚ್.ಎಸ್. ಶಿವಕುಮಾರ್ ಮತ್ತು ಆರ್.ಎಂ.ರವಿ ಅವರ ತಂಡವು ಸಂಸ್ಥೆಯ ಎಲ್ಲ ಮತದಾರರುಗಳ ಮನೆ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಒಂದು ಟೀಂ ಮೇಲೆ ಮತ್ತೊಂದು ಟೀಮಿನವರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಪ್ರಚಾರ ಕಾರ್ಯವನ್ನು ನಡೆಸಿದ್ದರು. ರಾಜಕೀಯ ಪಕ್ಷಗಳ ಚುನಾವಣೆಗಳನ್ನು ಮೀರಿಸುವಂತೆ ಪ್ರಚಾರಗಳು ನಡೆದಿದ್ದವು.ಕಾನೂನು ಸುವ್ಯಸ್ಥೆ ಕಾಪಾಡುವ ಉದ್ದೇಶದಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮತದಾನ ಮುಗಿದ ನಂತರ ಮತಗಳ ಏಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಜಿ.ಎಸ್.ಶಂಕರಪ್ಪ ತಿಳಿಸಿದ್ದಾರೆ.
- - - -9ಕೆಸಿಎನ್‌ಜಿ1: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿರುವ ಮತದಾರರು.