ಕನ್ನಡಪ್ರಭ ವಾರ್ತೆ ತುಮಕೂರುಏಕಬಳಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿ ಗಿನ್ನಿಸ್ ದಾಖಲೆಯ ಪುಟ ಸೇರಲು ತುಮಕೂರು ನಗರ ಸಿದ್ಧವಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ. ತಿಳಿಸಿದರು.
ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಪ್ರಯತ್ನ ಮಾಡಲಾಗುತ್ತಿದೆ. ಕಳೆದ 20 ದಿನಗಳಿಂದ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡುಗಳ ಮನೆ, ಹೋಟೆಲ್, ರೆಸ್ಟೋರೆಂಟ್, ಫುಡ್ ಸ್ಟ್ರೀಟ್, ಕನ್ವೆನ್ಷನ್ ಹಾಲ್‌ಗಳಿಂದ ಸಂಗ್ರಹಿಸಲಾದ ಏಕಬಳಕೆ ಬಾಟಲಿಗಳನ್ನು ಕಲಾಕೃತಿಗೆ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದೆ 14.500 ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಖತಾರ್ ದೇಶದಲ್ಲಿ ಖತಾರ್ ಎಂಬ ಆಂಗ್ಲ ಪದದ ಕಲಾಕೃತಿಯನ್ನು ನಿರ್ಮಿಸಿ ಗಿನ್ನಿಸ್ ದಾಖಲೆಯಾಗಿತ್ತು. ಈ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಲು ತುಮಕೂರು ನಗರ ಸಿದ್ಧವಾಗಿದೆ ಎಂದರು.ಬಾಟಲಿಗಳನ್ನು ಅರ್ಧ ಲೀ. 1 ಲೀ. 2 ಲೀ., ಪ್ರತ್ಯೇಕಿಸಿ ಸುಮಾರು 5 ಗಂಟೆಯಿಂದ 8 ಗಂಟೆಯೊಳಗೆ ಕಲಾಕೃತಿ ನಿರ್ಮಿಸುವ ಪ್ರಯತ್ನ ಮಾಡಲಾಗುವುದು. ಈ ಕಲಾಕೃತಿ ನಿರ್ಮಾಣಕ್ಕೆ ಸಮಯದ ಮಿತಿಯನ್ನು ನಿಗಧಿಗೊಳಿಸಿಲ್ಲ ಎಂದು ತಿಳಿಸಿದರಲ್ಲದೆ ಗಿನ್ನಿಸ್ ದಾಖಲೆಯನ್ನು ಲಂಡನ್ ನಿಂದ ಆಗಮಿಸಲಿರುವ ತೀರ್ಪುಗಾರರ ಸಮಕ್ಷಮದಲ್ಲಿ ಒಂದೇ ದಿನದಲ್ಲಿ ನಿರ್ಮಿಸಲಾಗುವುದೆಂದರು.
ಕಲಾಕೃತಿಯನ್ನು ಪಾಲಿಕೆ ಪೌರಕಾರ್ಮಿಕರು ನಿರ್ಮಿಸಲಿದ್ದಾರೆ. ಇದಕ್ಕಾಗಿ ಜನವರಿ 26 ಹಾಗೂ 27ರಂದು ಪೌರಕಾರ್ಮಿಕರಿಗೆ ಪೂರ್ವ ತಾಲೀಮು ನಡೆಸಲಾಗುವುದು. ಕಲಾಕೃತಿಯನ್ನು 15 x 75 ಮೀಟರ್ ಅಳತೆಯಲ್ಲಿ ನಿರ್ಮಿಸಲಾಗುತ್ತಿದ್ದು, ಕಲಾಕೃತಿ ನಿರ್ಮಾಣದಲ್ಲಿ ಮಣ್ಣು, ನೀರು ಬಳಸದೆ ಕೇವಲ ಗಮ್ ಮತ್ತು ಟೇಪ್ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಮೇಯರ್ ಪ್ರಭಾವತಿ, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರಲ್ಲದೆ ಭಾಗವಹಿಸಲಿಚ್ಛಿಸುವ ಸಾರ್ವಜನಿಕರು ಕಾಲ್ ಸೆಂಟರ್ ಸಂಖ್ಯೆ 0816-2213400ಗೆ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.