ಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿಭಟನೆ ವೇಳೆ ಕರ್ನಾಟಕ ಮಹಾಜನ ಪರಿವಾರ ಸಮಿತಿಯ ರಾಜ್ಯಾಧ್ಯಕ್ಷ ಅಂಚಿಹಳ್ಳಿ ರಾಮಸ್ವಾಮಿ ಮಾತನಾಡಿ ಸುಮಾರು ವರ್ಷಗಳಿಂದ ಸಣ್ಣಪುಟ್ಟ ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ದಲಿತ ಹಾಗೂ ಅಲೆಮಾರಿ ಸಮುದಾಯದ ಕುಟುಂಬಸ್ಥರು ಕೂಲಿ ಮಾಡಿ ಜೀವನ ಸಾಗಿಸುತ್ತಾ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿದ್ದು, ಮಳೆ ಬಂದರೆ ಸೋರುವುದು, ಮನೆಗಳಿಗೆ ನೀರು ನುಗ್ಗುವುದು ಸೇರಿದಂತೆ ಇತರೆ ಸಮಸ್ಯೆಗಳನ್ನ ಹೆದರಿಸುತ್ತಿದ್ದಾರೆ. ಸುಮಾರು 30- 40 ವರ್ಷಗಳಿಂದ ಇದೇ ರೀತಿಯ ಘಟನೆ ಜರುಗುತ್ತಿದ್ದರು ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತಗಳು ಯಾವುದೇ ಪರಿಹಾರ ಕಲ್ಪಿಸಿಲ್ಲ ಬದಲಾಗಿ ವಾಸಿಸುವ ನಮ್ಮ ಸ್ಥಳಗಳಿಗೆ ಹಕ್ಕುಪತ್ರಗಳನ್ನು ವಿತರಿಸಿಲ್ಲ. ಹೀಗಾಗಿ ಕೂಡಲೇ ದಲಿತ ಹಾಗೂ ಅಲೆಮಾರಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡುವಂತೆ ಒತ್ತಾಯಿಸಿದರು.
ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ಸೀನಪ್ಪನಹಳ್ಳಿಯಲ್ಲಿ ಅಲೆಮಾರಿ ಜನಾಂಗದ ಪರಿಶಿಷ್ಟ ಜಾತಿಗೆ ಸೇರಿದ ಸಿಳ್ಳೆಕ್ಯಾತ ಜನಾಂಗಕ್ಕೆ ಸೇರಿದ ಸುಮಾರು 25 ರಿಂದ 30 ಕುಟುಂಬಗಳು ಗುಡಿಸಲು ಕಟ್ಟಿಕೊಂಡು ವಾಸಮಾಡುತ್ತಿದ್ದಾರೆ. ಅಲೆಮಾರಿ ಜನಾಂಗದವರು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಸುಮಾರು ಬಾರಿ ಹೋರಾಟ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಹಕ್ಕುಪತ್ರ ನೀಡಿರುವುದಿಲ್ಲ ಎಂದರು.ತುಮಕೂರು ತಾಲೂಕು, ಕೋರಾ ಹೋಬಳಿ, ಎಂ. ಗೊಲ್ಲಹಳ್ಳಿಯಲ್ಲಿ 15-20 ದಲಿತ ಕುಟುಂಬದವರು ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇವರು ಕಡುಬಡವರಾಗಿದ್ದು, ಮಳೆ ಬಂದರೆ ಗುಡಿಸಲುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಕೆಲವು ಬಾರಿ ಗುಡಿಸಲಿಗೆ ಬೆಂಕಿ ಬಿದ್ದು, ಗುಡಿಸಲುಗಳು ಸುಟ್ಟುಹೋಗಿವೆ. ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಾ ಜೀವನ ಮಾಡುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಇತ್ತಕಡೆ ತಿರುಗಿ ನೋಡುತ್ತಿಲ್ಲ ಎಂದಿದ್ದಾರೆ.