ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಆರ್.ಟಿ.ಒ ಕಚೇರಿ ಬಳಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಹಸಿರು ನಿಶಾನೆ ತೋರಿಸಿ ಜಾಗೃತಾ ಜಾಥಾಗೆ ಚಾಲನೆ ನೀಡಿದರು. ಈ ವೇಳೆ ನಗರದ ವಿವಿಧ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ತಮ್ಮ ವಾಹನಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿ ಗಮನ ಸೆಳೆದರು.
ಡ್ರೈವಿಂಗ್ ಸ್ಕೂಲ್‌ಗಳ 80ಕ್ಕೂ ಹೆಚ್ಚು ವಾಹನಗಳನ್ನು ಜಾಥಾದಲ್ಲಿ ತರಲಾಗಿತ್ತು. ಆರ್‌ಟಿಓ ಕಚೇರಿಯಿಂದ ಸ್ವಾಮೀಜಿ ವೃತ್ತ, ಬಿಜಿಎಸ್ ವೃತ್ತ, ಬಸ್ ನಿಲ್ದಾಣ, ಸ್ವಾತಂತ್ರ ಚೌಕ, ಕೋಡಿ ಸರ್ಕಲ್, ಜಿಲ್ಲಾಧಿಕಾರಿ ಕಚೇರಿ ವೃತ್ತ, ಕೋತಿ ತೋಪು ಮೂಲಕ ಆರ್‌ಟಿಓ ಕಚೇರಿವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.ನಂತರ ಆರ್‌ಟಿಒ ಕಚೇರಿ ಆವರಣದಲ್ಲಿ ನಡೆದ ಸಮಾರಂಭ ಉದ್ಘಾಟಿಸಿದ ಜಂಟಿ ಸಾರಿಗೆ ಆಯುಕ್ತರಾದ ಎನ್.ಜಿ. ಗಾಯತ್ರಿ ಮಾತನಾಡಿ, ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ಅಪಘಾತಗಳನ್ನು ತಡೆಯಬಹುದು. ರಸ್ತೆ ಸುರಕ್ಷತೆ ಬಗ್ಗೆ ಇಲಾಖೆಯಿಂದ ಪ್ರತಿ ವರ್ಷ ಅರಿವು ಮೂಡಿಸಲಾಗುತ್ತದೆ. ಆದರೂ ನಿಯಮ ಉಲ್ಲಂಘನೆ ಪ್ರಕರಣಗಳು, ಅಪಘಾತಗಳು ಹೆಚ್ಚುತ್ತಲೇ ಇವೆ. ಸಂಚಾರಿ ನಿಯಮ ಎಲ್ಲರಿಗೂ ಅರಿವಾಗಬೇಕು, ಪೋಷಕರೂ ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿವಳಿಕೆ ನೀಡಬೇಕು. ನಿಯಮ ಉಲ್ಲಂಘಿಸಿದರೆ ದಂಡ, ಇತರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ರಾಜು ಮಾತನಾಡಿ, ವಾಹನ ಚಾಲಕರ ನಿರ್ಲಕ್ಷತೆ, ಅವಸರವೇ ಅಪಘಾತಗಳಿಗೆ ಪ್ರಮುಖ ಕಾರಣ. ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು, ಹೆಲ್ಮೆಟ್ ಧರಿಸಬೇಕು, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಬಾರದು, ಮುಂದೆ ಹೋಗುತ್ತಿರುವ ವಾಹನದ ನಡುವೆ ಅಂತರ ಕಾಪಾಡಿಕೊಳ್ಳಬೇಕು. ಸೂಚನಾ ಫಲಕಗಳ ಸೂಚನೆ ಅನುಸರಿಸಿ ವಾಹನ ಚಲಾಯಿಸಬೇಕು ಎಂದು ಹೇಳಿದರು.
ಸಂಚಾರಿ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಗುರುನಾಥ್ ಮಾತನಾಡಿ, ಅಪಘಾತದಿಂದ ಉಂಟಾಗುವ ಒಂದು ಸಾವು ಒಂದು ಕುಟುಂಬವನ್ನು ಜೀವನಪರ್ಯಾಂತ ನರಳಿಸುತ್ತದೆ. ಅಪಘಾತ ಆಕಸ್ಮಿಕವಾದರೂ ಅದನ್ನು ತಡೆಯಲು ನಮ್ಮಿಂದ ಸಾಧ್ಯವಾಗುತ್ತದೆ. ಎಚ್ಚರಿಕೆಯಿಂದ, ನಿಯಮಾನುಸಾರ ವಾಹನ ಚಲಾಯಿಸಬೇಕು ಎಂದರು.
ವಾಹನ ತರಬೇತಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಜಿಲ್ಲಾಧ್ಯಕ್ಷ ಟಿ.ಆರ್. ಸದಾಶಿವಯ್ಯ ಮಾತನಾಡಿ, ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಅಭ್ಯರ್ಥಿಗಳಿಗೆ ಸಮರ್ಪಕವಾಗಿ ಚಾಲನಾ ತರಬೇತಿ ನೀಡಿ ಅವರಿಗೆ ಸಂಚಾರಿ ನಿಯಮಗಳ ಬಗ್ಗೆ ಪೂರ್ಣ ತಿಳಿವಳಿಕೆ ನೀಡಬೇಕು ಎಂದು ಮನವಿ ಮಾಡಿದರು.
QUOTE
ಎಸ್. ರಾಜು ಪ್ರಾದೇಶಿಕ ಸಾರಿಗೆ ಅಧಿಕಾರಿ