15 ದಿನಗಳ ಹಸುಳೆ ತಲೆಯೊಳಗಿದ್ದ ಗೆಡ್ಡೆ ನಿವಾರಣೆ!

KannadaprabhaNewsNetwork |  
Published : Sep 26, 2026, 01:45 AM IST
ಕೆಎಂಸಿ | Kannada Prabha

ಸಾರಾಂಶ

ಕೇವಲ 15 ದಿನಗಳ ಹಸುಳೆಯ ತಲೆಬುರುಡೆಯೊಳಗಿದ್ದ ಗಣನೀಯ ಗಾತ್ರ (ಹೈ ಗ್ರೇಡ್) ಗೆಡ್ಡೆಯೊಂದನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು 3 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದು, ಇಂದು ಆ ಮಗು ಸಂಪೂರ್ಣ ಚೇತರಿಸಿಕೊಂಡು ಪ್ರಿಸ್ಕೂಲ್‌ಗೆ ಹೋಗುವುದಕ್ಕೆ ಸಿದ್ಧನಾಗಿದ್ದಾನೆ.

ಮಣಿಪಾಲ; ಕೇವಲ 15 ದಿನಗಳ ಹಸುಳೆಯ ತಲೆಬುರುಡೆಯೊಳಗಿದ್ದ ಗಣನೀಯ ಗಾತ್ರ (ಹೈ ಗ್ರೇಡ್) ಗೆಡ್ಡೆಯೊಂದನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು 3 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದು, ಇಂದು ಆ ಮಗು ಸಂಪೂರ್ಣ ಚೇತರಿಸಿಕೊಂಡು ಪ್ರಿಸ್ಕೂಲ್‌ಗೆ ಹೋಗುವುದಕ್ಕೆ ಸಿದ್ಧನಾಗಿದ್ದಾನೆ. ಈ ಮಗು ಹುಟ್ಟಿದಾಗ ಅದರ ತಲೆಯ ಗಾತ್ರವು ದೊಡ್ಡದಾಗಿ ಬೆಳೆದಿತ್ತು. ಹುಟ್ಟಿ 15 ದಿನಗಳಲ್ಲಿ ಮಗವನ್ನು ಆಸ್ಪತ್ರೆಗೆ ಕರೆತರಲಾಯಿತು. ಮಗುವಿನ ತಲೆಯ ಎಂಆರ್‌ಐ ಸ್ಕ್ಯಾನ್‌ ಮಾಡಿದಾಗ ತಲೆಬುರುಡೆಯೊಳಗೆ ದೊಡ್ಡ ದ್ರವ್ಯರಾಶಿಯೊಂದು ಪತ್ತೆಯಾಯಿತು. ಮಗು ಕೇವಲ 2 ವಾರಗಳ ಹಸುಳೆಯಾಗಿದ್ದರೂ, ಆ ಗೆಡ್ಡೆಯು ಆಗಲೇ ಅತ್ಯಂತ ದೊಡ್ಡದಾಗಿತ್ತು.

ಕ್ಲಿಷ್ಟ ಶಸ್ತ್ರ ಚಿಕಿತ್ಸೆ: ನವಜಾತ ಶಿಶುವಿನಲ್ಲಿ ರಕ್ತದ ಪ್ರಮಾಣವು ಬಹಳ ಕಡಿಮೆ ಇರುತ್ತದೆ, ಜೊತೆಗೆ ತಾಂತ್ರಿಕವಾಗಿ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಸವಾಲಾಗಿರುತ್ತದೆ, ಜೊತೆಗೆ ಇಷ್ಟು ದೊಡ್ಡ ಗಾತ್ರದ ಗೆಡ್ಡೆಯಿರುವಾಗ ಈ ಸವಾಲು ಇನ್ನಷ್ಟು ಹೆಚ್ಚಾಗಿತ್ತು. ಕೊನೆಗೆ ಹೆತ್ತವರಿಗೆ ಸಂಪೂರ್ಣ ಅರಿವು ಮೂಡಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ನರರೋಗ ಶಸ್ತ್ರಚಿಕಿತ್ಸಕರು ಗೆಡ್ಡೆ ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಸವಾಲುಗಳಿದ್ದರೂ, ಮಗು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿತು, ಶಸ್ತ್ರಚಿಕಿತ್ಸೆ ನಡೆದ ಒಂದು ವಾರದ ನಂತರ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಕಳೆದ 3 ವರ್ಷಗಳಿಂದ ಆ ಮಗುವನ್ನು ನಿಯಮಿತವಾಗಿ ಪರಿಶೀಲನೆಗೆ ಒಳಪಡಿಸಲಾಗಿದ್ದು, ಆಸ್ಪತ್ರೆಯ ಡಾ. ರಾಘವೇಂದ್ರ ನಾಯಕ್ ನೇತೃತ್ವದ ನರಶಸ್ತ್ರಚಿಕಿತ್ಸಾ ವಿಭಾಗವು, ಡಾ. ಶೀಲಾ ಎಸ್. ಮಥಾಯಿ ನೇತೃತ್ವದ ನವಜಾತ ಶಿಶು ಆರೈಕೆ ತಂಡ, ಡಾ. ವಾಸುದೇವ್ ಭಟ್ ನೇತೃತ್ವದ ಮಕ್ಕಳ ಆಂಕೊಲಾಜಿ ಸೇವೆಗಳು ಮತ್ತು ಸಮಗ್ರ ಪುನಶ್ಚೇತನ ಸೌಲಭ್ಯಗಳೊಂದಿಗೆ ಮಗು ಸಂಪೂರ್ಣ ಗುಣಮುಖವಾಗಿ ಉತ್ಸಾಹಭರಿತವಾಗಿದ್ದು ಪೂರ್ವ-ಪ್ರಾಥಮಿಕ ಶಾಲೆಗೆ ಹೋಗಲು ಸಿದ್ಧವಾಗಿದೆ.ಡಾ. ರಾಘವೇಂದ್ರ ನಾಯಕ್ ಅವರು, ಶಸ್ತ್ರಚಿಕಿತ್ಸೆಯ ಸವಾಲಿನ ಜೊತೆಗೆ ಆತಂಕಗೊಂಡಿರುವ ಪೋಷಕರಿಗೆ ಸೂಕ್ತ ಮಾಹಿತಿ ನೀಡಿ ಸಮಾಧಾನಪಡಿಸುವುದು ಕೂಡ ಅತ್ಯಂತ ಕಠಿಣ ಕೆಲಸವಾಗಿತ್ತು ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿ-ಯಾದಗಿರಿ ರೈಲು ಮಾರ್ಗ: ಗರಿಗೆದರಿದ ನಿರೀಕ್ಷೆ
ಹೆಣ್ಮಕ್ಕಳು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿ: ಪ್ರೊ. ಎಸ್. ಇಂದುಮತಿ