ಕೊಪ್ಪಳ:
ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆ. 26ರಂದು ತುಂಗಭದ್ರಾ ಆರತಿ ಮಹೋತ್ಸವ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮ ಹುಲಿಗಿಯ ತುಂಗಭದ್ರಾ ನದಿ ತೀರದಲ್ಲಿ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಹುಲಿಗೆಮ್ಮ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪವಿತ್ರ ತೀರ್ಥ ಕ್ಷೇತ್ರ ಕಾಶಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಂತೆ ತುಂಗಭದ್ರಾ ಆರತಿ ಮಹೋತ್ಸವ, ಬಾಗಿನ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಆ. 26ರಂದು ಸಂಜೆ 6.30ರಿಂದ 7.15ರ ವರೆಗೆ ತುಂಗಭದ್ರಾ ನದಿ ತೀರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಶಾಸಕರು ಹಾಗೂ ಗಣ್ಯರು, ಸ್ವಾಮೀಜಿಗಳು ಭಾಗವಹಿಸುವರು. ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರ ವರೆಗೆ ಚಂಡಿಕಾ ಹೋಮ ಮತ್ತು ಮಧ್ಯಾಹ್ನ 12.30 ರಿಂದ 3ರ ವರೆಗೆ ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ, ಸಂಜೆ 4ರಿಂದ 5.30ರ ವರೆಗೆ ಹುಲಿಗಿಯ ಹಿಟ್ನಾಳ ರಸ್ತೆಯ ಚೆನ್ನಮ್ಮ ಸರ್ಕಲ್‌ನಿಂದ ದೇವಸ್ಥಾನದ ವರೆಗೆ ವಿಶೇಷ ಕುಂಭಮೇಳದೊಂದಿಗೆ ಹುಲಿಗೆಮ್ಮ ದೇವಿಯ ಭಾವಚಿತ್ರದ ಮೆರೆವಣಿಗೆ ಜರುಗಲಿದೆ. ಸಂಜೆ 5.30ರಿಂದ 6ರ ವರೆಗೆ ಮಹಿಳೆಯರಿಗೆ ಉಡಿ ತುಂಬುವ, ಬಳಿಕ ಭರತನಾಟ್ಯ ಮೂಲಕ ದೇವಿಯನ್ನು ಸ್ವಾಗತಿಸುವುದು ಹಾಗೂ ನದಿ ತಟದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.ಕಾಶಿ ಅರ್ಚಕರು:
ಈ ಕಾರ್ಯಕ್ರಮಕ್ಕೆ ಕಾಶಿಯಿಂದ 15 ಅರ್ಚಕರನ್ನು ಕರೆಸಿದ್ದು ಅವರ ಉಸ್ತುವಾರಿಯಲ್ಲಿ ನಡೆಯಲಿದೆ ಎಂದ ಸಂಸದರು, ಪ್ರಥಮ ಬಾರಿಗೆ ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ತುಂಗಭದ್ರಾ ಆರತಿ ಮಹೋತ್ಸವ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರ ಬಾಳು ಸುಖ, ಸಮೃದ್ಧಿಯಿಂದ ಕೂಡಿರಲಿ ಮತ್ತು ಅವರ ಬದುಕಿನಲ್ಲಿ ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಪ್ರತಿ ವರ್ಷವೂ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶರಾವ್, ಹುಲಿಗೆಮ್ಮ ದೇವಿಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದ್ಯಸರು ಸೇರಿದಂತೆ ದೇವಸ್ಥಾನದ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.