ತುಂಗಭದ್ರಾ ಬೋರ್ಡ್ ತಾರತಮ್ಯದ ಲೆಕ್ಕ ಬಯಲು

KannadaprabhaNewsNetwork |  
Published : Aug 15, 2024, 01:51 AM IST
14ಕೆಪಿಎಲ್21 ಸಿ.ಎಂ. ಅವರಿಗೆ ನೀಡಿರುವ ಮಾಹಿತಿಯಲ್ಲಿ  ರಾಜ್ಯದ ನೀರಾವರಿ ಪಾಲು,  ಆಂಧ್ರ, ತೆಲಾಂಗಣದ ನೀರಾವರಿ ಪಾಲು ಮಾಹಿತಿ  | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯ ರಾಜ್ಯದಲ್ಲಿದ್ದರೂ, ಆಂಧ್ರದ ಹಿರಿತನ ಇರುವ ಮಂಡಳಿ ನಿಯಂತ್ರಣ ಮತ್ತು ನಿರ್ವಹಣೆ ಮಾಡುತ್ತಿದೆ. ಈ ಬೋರ್ಡ್‌ನಿಂದ ಅನ್ಯಾಯವಾಗುತ್ತದೆ ಎನ್ನುವುದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಮಾಹಿತಿಯಲ್ಲಿ ಬಯಲಾಗಿದೆ.

ಸಿಎಂ ಅವರಿಗೆ ನೀಡಿರುವ ಮಾಹಿತಿಯಲ್ಲಿ ಕಳ್ಳ ಲೆಕ್ಕ ಅನಾವರಣ

ಶೇ. 65ರಷ್ಟು ಪಾಲು ಇರುವ ರಾಜ್ಯದ ನೀರಾವರಿ 9.25 ಲಕ್ಷ ಎಕರೆ

ಶೇ. 35 ಪಾಲು ಇರುವ ಆಂಧ್ರ, ತೆಲಂಗಾಣದಲ್ಲಿ 7.12 ಲಕ್ಷ ನೀರಾವರಿ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಜಲಾಶಯ ರಾಜ್ಯದಲ್ಲಿದ್ದರೂ, ಆಂಧ್ರದ ಹಿರಿತನ ಇರುವ ಮಂಡಳಿ ನಿಯಂತ್ರಣ ಮತ್ತು ನಿರ್ವಹಣೆ ಮಾಡುತ್ತಿದೆ. ಈ ಬೋರ್ಡ್‌ನಿಂದ ಅನ್ಯಾಯವಾಗುತ್ತದೆ ಎನ್ನುವುದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಮಾಹಿತಿಯಲ್ಲಿ ಬಯಲಾಗಿದೆ.

ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್‌ ಮುರಿದ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ತುಂಗಭದ್ರಾ ಬೋರ್ಡ್ ಅಧಿಕಾರಿಗಳನ್ನೊಳಗೊಂಡು ನಡೆಸಿದ ಸಭೆಯಲ್ಲಿ ನೀಡಿದ ಮಾಹಿತಿಯಲ್ಲಿ ಇದು ಅನಾವರಣಗೊಂಡಿದೆ. ತುಂಗಭದ್ರಾ ಬೋರ್ಡ್ ರಾಜ್ಯದ ಪಾಲಿಗೆ ಬಿಳಿಯಾನೆ ಎನ್ನುವುದು ದಾಖಲೆ ಸಮೇತ ಬಹಿರಂಗವಾಗಿದೆ.ಏನಿದು ಅನ್ಯಾಯ?:

ತುಂಗಭದ್ರಾ ಜಲಾಶಯದಲ್ಲಿ ನೀರಿನ ಪಾಲು ಶೇ. 65-35 ಅನುಪಾತದಲ್ಲಿ ಹಂಚಿಕೆಯಾಗಿದೆ. ಅಂದರೆ ರಾಜ್ಯಕ್ಕೆ ಶೇ. 65 ಹಾಗೂ ಆಂಧ್ರಕ್ಕೆ (ಈಗ ತೆಲಂಗಾಣ ಸೇರಿ) ಶೇ. 35ರಷ್ಟು ಎನ್ನುವ ಸೂತ್ರದಡಿಯಲ್ಲಿಯೇ ಲಭ್ಯವಾಗುವ ಆಯಾ ವರ್ಷದ ನೀರು ಹಂಚಿಕೆ ಮಾಡಲಾಗುತ್ತದೆ.

ಶೇ. 65 ಪಾಲನ್ನು ಹೊಂದಿರುವ ರಾಜ್ಯದ ನೀರಾವರಿ ಪ್ರದೇಶ 9.52 ಲಕ್ಷ ಎಕರೆ. ಆದರೆ, ತೆಲಂಗಾಣ ಸೇರಿ ಆಂಧ್ರಕ್ಕೆ 7.12 ಲಕ್ಷ (ಆಂಧ್ರಕ್ಕೆ 6.25 ಲಕ್ಷ, ತೆಲಂಗಾಣಕ್ಕೆ 87 ಸಾವಿರ ಎಕರೆ) ಎಕರೆ ನೀರಾವರಿ ಪ್ರದೇಶವಿದೆ ಎನ್ನುವ ಅಧಿಕೃತ ಮಾಹಿತಿ ನೀಡಿದ್ದಾರೆ.

ಶೇ. 35 ಪಾಲು ಹೊಂದಿರುವ ಆಂಧ್ರ, ತೆಲಂಗಾಣ ಸೇರಿ 7.12 ಲಕ್ಷ ಎಕರೆ ನೀರಾವರಿಯಾಗುತ್ತದೆ ಎನ್ನುವುದಾದರೇ ರಾಜ್ಯದಲ್ಲಿ ಬರೋಬ್ಬರಿ 20 ಲಕ್ಷ ಎಕರೆ ನೀರಾವರಿಯಾಗಬೇಕು. ರಾಜ್ಯದಲ್ಲಿ 9.25 ಲಕ್ಷ ಎಕರೆ ನೀರಾವರಿಯಾಗುತ್ತದೆ ಎನ್ನುವುದಾದರೆ ಆಂಧ್ರದಲ್ಲಿ 5.25 ಲಕ್ಷ ಎಕರೆ ಮಾತ್ರ ನೀರಾವರಿಯಾಗಬೇಕು. ಇದರಿಂದಲೇ ಗೊತ್ತಾಗುತ್ತದೆ ನೀರು ಬಳಕೆಯಲ್ಲಿ ರಾಜ್ಯಕ್ಕೆ ಎಷ್ಟು ಅನ್ಯಾಯವಾಗುತ್ತದೆ ಎಂದು. ರಾಜ್ಯದ ರೈತರು ಅಧಿಕ ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಳ್ಳುತ್ತಾರೋ ಅಥವಾ ಆಂಧ್ರದವರು ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುತ್ತಾರೋ ಎನ್ನುವುದಾದರೂ ಗೊತ್ತಾಗಬೇಕು.ಆವಿಯಾಗುತ್ತದೆ ನೀರು:

ಬೇರೆ ಯಾವ ಜಲಾಶಯದಲ್ಲಿ ಇಲ್ಲದ ಆವಿಯಾಗುವ ನೀರಿನ ಲೆಕ್ಕಾಚಾರ ತುಂಗಭದ್ರಾ ಜಲಾಶಯದಲ್ಲಿದೆ. ಪ್ರತಿ ವರ್ಷ ಬರೋಬ್ಬರಿ 18 ಟಿಎಂಸಿ ನೀರು ಆವಿಯಾಗುತ್ತದೆ ಎಂದು ಬೋರ್ಡ್ ಲೆಕ್ಕ ಹಾಕಿ, ಮೈನಸ್ ಮಾಡುತ್ತದೆ. ಅಷ್ಟೇ ಅಲ್ಲ, ಸೋರಿಕೆ ಎಂದು 5-6 ಟಿಎಂಸಿ ಪ್ರತಿ ವರ್ಷ ಸಂಗ್ರಹವಾಗುವ ನೀರಿನಲ್ಲಿ ಕಳೆದು ಲೆಕ್ಕ ಹಾಕಲಾಗುತ್ತದೆ.

ಇದೆಲ್ಲವನ್ನು ತುಂಗಭದ್ರಾ ಜಲಾಶಯದ ಚೀಪ್ ಎಂಜನಿಯರ್ ಆಗಿದ್ದ ರಾಜಶೇಖರ ಬಹಳ ಹಿಂದೆಯೇ ಖಡಕ್ ಆಗಿಯೇ ಪ್ರಶ್ನೆ ಮಾಡಿದ್ದರು. ಆಂಧ್ರ ಬೋರ್ಡಿಗೂ ಪತ್ರ ಬರೆದಿದ್ದರು. ಎಲ್ಲೂ ಇಲ್ಲದ ಲೆಕ್ಕಾಚಾರ ಇಲ್ಲೇಕೆ ಎಂದು ಕೇಳಿದ್ದು, ದೊಡ್ಡ ವಿವಾದಕ್ಕೆ ಕಾರಣವಾಯಿತು. ಅವರಂತೂ ಇದನ್ನು ನಾನು ಒಪ್ಪುವುದಿಲ್ಲ ಎಂದು ಬಲವಾಗಿ ಪ್ರತಿಪಾದನೆ ಮಾಡಿ, ರಾಜ್ಯದ ಹಿತಕಾಯಲು ಶ್ರಮಿಸಿದ್ದರು. ಆಂಧ್ರದ ಲಾಭಿಯಿಂದಾಗಿ ಇವರನ್ನೇ ವರ್ಗಾವಣೆ ಮಾಡಲಾಯಿತು. ನಂತರ ಈ ಕಳ್ಳ ಲೆಕ್ಕಾಚಾರವನ್ನು ಯಾರೂ ಪ್ರಶ್ನೆ ಮಾಡಲೇ ಇಲ್ಲ. ಇಂದಿಗೂ ಅದು ಮುಂದುವರೆದಿದೆ.

ತುಂಗಭದ್ರಾ ಬೋರ್ಡ್ ಬಿಳಿಯಾನೆಯಾಗಿದ್ದು, ಇದನ್ನು ರದ್ದು ಮಾಡುವವರೆಗೂ ರಾಜ್ಯಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಎಂ.ಪಿ. ಪ್ರಕಾಶ್ ಹೇಳಿದ್ದರು. ಈಗಲೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಕೈತೊಳೆದುಕೊಳ್ಳುತ್ತದೆಯೇ ಹೊರತು, ಬೋರ್ಡ್ ರದ್ಧತಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಲೇ ಇಲ್ಲ. ಈಗಿರುವ ಕಾರ್ಯದರ್ಶಿ ಸೇರಿದಂತೆ ಹಲವಾರು ವರ್ಷಗಳಿಂದ ಆಂಧ್ರ ಮೂಲದವರೇ ಕಾರ್ಯದರ್ಶಿಯಾಗುತ್ತಾರೆ. ಹೀಗಾಗಿ, ತುಂಗಭದ್ರಾ ಜಲಾಶಯ ರಾಜ್ಯದಲ್ಲಿದ್ದರೂ ಅನ್ಯಾಯ ಮಾತ್ರ ರಾಜ್ಯಕ್ಕೆ ಆಗುತ್ತಲೇ ಇರುತ್ತದೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ