ಕನ್ನಡಪ್ರಭ ವಾರ್ತೆ ದಾವಣಗೆರೆ
ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ನದಿ ಪಾತ್ರದ ಗ್ರಾಮಗಳ ಜನರು, ಜಾನುವಾರುಗಳ ರಕ್ಷಣೆಗಾಗಿ ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ತಾಲೂಕು ಆಡಳಿತ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಅವರು ಆದೇಶಿಸಿದ್ದಾರೆ. ತುಂಗಾ ಜಲಾಶಯದಿಂದ ಸುಮಾರು 50 ಸಾವಿರ ಕ್ಯೂಸೆಕ್ಸ್ ಗಿಂತಲೂ ಅಧಿಕ ನೀರು ಬಿಡಲಾಗುತ್ತಿದೆ. ಈ ಪ್ರಮಾಣ ಇನ್ನೂ ಹೆಚ್ಚುವ ನಿರೀಕ್ಷೆ ಇದ್ದು, ಹೊನ್ನಾಳಿ ಪಟ್ಟಣದ ಬಾಲರಾಜ ಘಾಟ್ ಬಳಿ ಸಮಸ್ಯೆಯಾಗಲಿದ್ದು, ಅಲ್ಲಿನ ಜನರಿಗೆ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯುವಂತೆ ಅಲ್ಲಿನ ತಹಸೀಲ್ದಾರ್‌ಗೆ ಸೂಚಿಸಿದ್ದಾರೆ.
ಹರಿಹರ ತಾಲೂಕು ಕೇಂದ್ರದ ಗಂಗಾ ನಗರದ ಬಳಿ ತುಂಗಭದ್ರಾ ನದಿ ನೀರಿನ ಪ್ರಮಾಣ ಹೆಚ್ಚಳದಿಂದ ಜನರಿಗೆ ತೊಂದರೆಯಾಗಲಿದೆ. ಅಲ್ಲಿ ವಾಸಿಸುವ ಜನರಿಗೆ ತಾತ್ಕಾಲಿಕವಾಗಿ ಎಪಿಎಂಸಿ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್‌ಗೆ ಆದೇಶಿಸಿದ್ದಾರೆ.ಹೊನ್ನಾಳಿಯಲ್ಲಿ ವಿಪತ್ತು ನಿರ್ವಹಣೆ ಪರಿಶೀಲನೆಗಾಗಿ ಜು.23ರಂದು ಸಭೆ ಕರೆಯಲಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕ್ಷಣಕ್ಷಣಕ್ಕೂ ಏರಿಕೆಯಾಗುವುದರಿಂದ ವಿಪತ್ತು ನಿರ್ವಹಣಾ ತಂಡವನ್ನು ಸನ್ನದ್ಧವಾಗಿಡಲು ಸೂಚಿಸಲಾಗಿದೆ. ಸಾರ್ವಜನಿಕರು ನದಿ ಪಾತ್ರದಲ್ಲಿ ಓಡಾಟ ಮಾಡಬಾರದು. ಜಾನುವಾರುಗಳನ್ನು ನದಿಗೆ ಇಳಿಸದಂತೆ, ನದಿ ಪಾತ್ರದಲ್ಲಿ ಅವುಗಳು ಮೇಯಲು ಬಿಡದಂತೆ ನೋಡಿಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿರುವ ಮಧ್ಯ ಕರ್ನಾಟಕದ ಜೀವನದಿ
ಕಳೆದ ಕೆಲ ದಿನಗಳಿಂದ ಮಲೆನಾಡು, ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಸಹಜವಾಗಿಯೇ ತುಂಗಾ ಮತ್ತು ಭದ್ರಾ ಅಣೆಕಟ್ಟೆಗಳ ಜಲಾನಯನ ಪ್ರದೇಶದಲ್ಲಿ ಸಮೃದ್ಧವಾಗಿ ಮಳೆಯಾಗುತ್ತಿರುವ ಬೆನ್ನಲ್ಲೇ ಡ್ಯಾಂಗಳಿಂದ ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗಿದೆ. ಕ್ಷಣಕ್ಷಣಕ್ಕೂ ನದಿ ನೀರಿನ ಹರಿವಿನ ಪ್ರಮಾಣ ಹೆಚ್ಚುತ್ತಿದೆ. ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯಿಂದಾಗಿ ನ್ಯಾಮತಿ, ಹೊನ್ನಾಳಿ, ಹರಿಹರ ತಾಲೂಕಿನ ವಿವಿಧೆಡೆ ಅನೇಕ ಗ್ರಾಮಗಳ ಸಂಪರ್ಕ ರಸ್ತೆ ಜಲಾವೃತವಾಗಿದ್ದು, ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಹೊನ್ನಾಳಿ ನದಿ ಪಾತ್ರದ ಪ್ರದೇಶ, ಹರಿಹರ ತಾ. ಉಕ್ಕಡಗಾತ್ರಿಯ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪರ್ಕ ಕಡಿತವಾಗಿದ್ದು, ನದಿ ಅಪಾಯದ ಮಟ್ಟವನ್ನು ತ ತಲುಪುವತ್ತ ಸಾಗುತ್ತಿದೆ.