ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ; ಹಿನ್ನೀರಿನಲ್ಲಿ ಸತ್ತು ಬೀಳುತ್ತಿರುವ ಮೀನುಗಳು

KannadaprabhaNewsNetwork |  
Published : Apr 15, 2025, 12:57 AM ISTUpdated : Apr 15, 2025, 01:07 PM IST
14 ಎಚ್‌ಪಿಟಿ5- ಹೊಸಪೇಟೆಯ ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ತಿರುಗಿದ್ದು, ಮೀನುಗಳು ಕೂಡ ಸತ್ತು ಬಿದ್ದಿವೆ. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ತಿರುಗಿದ್ದು, ಹಿನ್ನೀರಿನಲ್ಲಿ ಮೀನುಗಳು ಕೂಡ ಸತ್ತು ಬೀಳುತ್ತಿವೆ. ಮೇಲ್ಭಾಗದಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ಜಲಾಶಯದ ಒಡಲು ಸೇರಿದೆ ಎಂಬ ಆತಂಕ ಮನೆ ಮಾಡಿದೆ.

  ಹೊಸಪೇಟೆ : ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ತಿರುಗಿದ್ದು, ಹಿನ್ನೀರಿನಲ್ಲಿ ಮೀನುಗಳು ಕೂಡ ಸತ್ತು ಬೀಳುತ್ತಿವೆ. ಮೇಲ್ಭಾಗದಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ಜಲಾಶಯದ ಒಡಲು ಸೇರಿದೆ ಎಂಬ ಆತಂಕ ಮನೆ ಮಾಡಿದೆ.

ಜಲಾಶಯದಲ್ಲಿ ಸದ್ಯ 7.196 ಟಿಎಂಸಿ ನೀರಿದೆ. ನೀರಿನ ಪ್ರಮಾಣ ಕಡಿಮೆ ಆಗಿದ್ದು, ಬಿಸಿಲಿನ ತಾಪಮಾನ ಹಾಗೂ ಜಲತ್ಯಾಜ್ಯಗಳಿಂದ ಮಾಲಿನ್ಯ ಹೆಚ್ಚಾಗಿ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತಿದೆ ಎಂಬ ಆತಂಕ ವನ್ಯಜೀವಿ ಪ್ರೇಮಿಗಳಲ್ಲಿ ವ್ಯಕ್ತವಾಗಿದೆ.

ಸಣ್ಣ ಮೀನುಗಳಿಂದ ಹಿಡಿದು, ದೊಡ್ಡ ಮೀನುಗಳು ಜಲಾಶಯದಲ್ಲಿ ಸಾಯುತ್ತಿವೆ. ಟಿಬಿ ಡ್ಯಾಂನಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ಹಿನ್ನೀರು ಪ್ರದೇಶದಲ್ಲಿ ಮೀನುಗಾರರು ಮೀನು ಹಿಡಿಯುತ್ತಾರೆ. ಆದರೆ, ಮೀನುಗಾರರು ನದಿಯಲ್ಲಿ ಮೀನು ಹಿಡಿದು ದಡಕ್ಕೆ ತರವಷ್ಟರಲ್ಲಿಯೇ ಮೀನುಗಳು ಸತ್ತಿರುತ್ತವೆ. ನೀರಿನಲ್ಲಿ ಮೀನುಗಳು ಹಿಂಡು, ಹಿಂಡಾಗಿ ಸತ್ತು ತೇಲುತ್ತಿವೆ. ಜಲಾಶಯದಲ್ಲಿ ತ್ಯಾಜ್ಯ ಸೇರಿ ನೀರು ಹಚ್ಚ ಹಸಿರು ಬಣ್ಣಕ್ಕೆ ತಿರುಗುತ್ತಿದೆ ಎಂಬ ಆತಂಕವೂ ಇದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಪರಿಶೀಲನೆ ನಡೆಸಬೇಕು ಎಂಬ ಆಗ್ರಹವೂ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿದೆ.

2008ರಲ್ಲೂ ಜಲಾಶಯದ ನೀರು ಹಚ್ಚ ಹಸಿರು ಬಣ್ಣಕ್ಕೆ ತಿರುಗಿತ್ತು. ಪ್ರತಿ ವರ್ಷ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದ್ದರೂ ತುಂಗಭದ್ರಾ ಮಂಡಳಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಇದು ಸಾಮಾನ್ಯ ಎಂದು ಸುಮ್ಮನಾಗುತ್ತಿದ್ದಾರೆ. ಜಲಾಶಯದ ನೀರನ್ನು ಪ್ರಯೋಗಾಲಯಕ್ಕೆ ರವಾನಿಸಿ, ವರದಿ ಪಡೆದು; ಜಲಾಶಯದಲ್ಲಿ ಕಾರ್ಖಾನೆಗಳ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯ ಸೇರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

ತುಂಗಭದ್ರಾ ಜಲಾಶಯ ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜನರು ಹಾಗೂ ಜಾನುವಾರು, ವನ್ಯಜೀವಿಗಳು ಮತ್ತು ಜೀವವೈವಿಧ್ಯಕ್ಕೆ ಆಸರೆಯಾಗಿದೆ. ಈಗ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ತಿರುಗಿದೆ. ಜೊತೆಗೆ ಮೀನುಗಳು ಸತ್ತು ಬೀಳುತ್ತಿವೆ. ಜಲಾಶಯದ ನೀರಿನ ಕುರಿತು ಪರೀಕ್ಷೆ ಮಾಡಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುವೆ. ಪ್ರಯೋಗಾಲಯಕ್ಕೂ ನೀರು ಪರೀಕ್ಷೆಗೆ ಕಳುಹಿಸಲಾಗುವುದು. ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ಜೊತೆಗೆ ಚರ್ಚಿಸುವೆ ಎಂದು ಶಾಸಕ ಎಚ್.ಆರ್‌. ಗವಿಯಪ್ಪ ತಿಳಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...