ಮುಂಡರಗಿ: ಗದಗ-ಬೆಟಗೇರಿ ಅವಳಿ ನಗರ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಹೂವಿನ ಹಡಗಲಿ ತಾಲೂಕು ಸೇರಿದಂತೆ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವಾದ ತುಂಗಭದ್ರಾ ನದಿ ನೀರು ವಿಚಿತ್ರ ರೂಪ ತಾಳಿ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಭಾಗ ನದಿಯಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಯಾವ ಕಾರಣಕ್ಕಾಗಿ ಹೀಗಾಗಿದೆ ಎನ್ನುವ ಆಶ್ಚರ್ಯ ಮತ್ತು ಆತಂಕ ಹೆಚ್ಚಾಗಿದೆ.ಎಲ್ಲೆಲ್ಲಿ ಸಮಸ್ಯೆ: ತಾಲೂಕಿನ ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಕಕ್ಕೂರು, ಕಕ್ಕೂರ ತಾಂಡಾ, ನಾಗರಹಳ್ಳಿ, ಹೆಸರೂರು ಭಾಗಗಳಲ್ಲಿಯೂ ಹಸಿರು ಬಣ್ಣಕ್ಕೆ ತಿರುಗಿದೆ. ರೈತರ ಪಂಪ್‌ಸೆಟ್ ಗಳಲ್ಲಿಯೂ ಸಹ ಹಸಿರು ನೀರು ಬರುತ್ತಿದೆ. ಈ ನೀರನ್ನು ಬೆಳೆಗೆ ಹಾಯಿಸಿದರೆ ದನಕರುಗಳಿಗೆ ಕುಡಿಸಿದರೆ ಏನಾಗಲಿದೆಯೋ ಎನ್ನುವ ಆತಂಕ ಗ್ರಾಮಗಳ ಜನರಲ್ಲಿ ಮನೆ ಮಾಡಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗುರುವಾರ ನದಿಗೆ ಭೇಟಿ ನೀಡಿ ಹಮ್ಮಿಗಿ ಬಳಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ಹತ್ತಿರ ಗದಗ-ಬೆಟಗೇರಿ ಅವಳಿ ನಗರಗಳಿಗೆ ನೀರು ಸರಬರಾಜು ಮಾಡುವ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ಈ ಮೊದಲಿದ್ದಂತೆಯೇ ಈಗಲೂ ಸಹ ನದಿಯಲ್ಲಿ ಅದೇ ಬಣ್ಣದ ನೀರು ಇದ್ದು ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಆದಾಗ್ಯೂ ಸಹ ಅಲ್ಲಿನ ನೀರನ್ನು ತಂದು ಲ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿದೆ ಎಂದು ಎಇಇ ಗದಗ-ಬೆಟಗೇರಿ ನಗರ ಸಭೆ ಎಚ್.ಎ.ಬಂಡಿವಡ್ಡರ ತಿಳಿಸಿದ್ದಾರೆ.
ಕಕ್ಕೂರು, ಕಕ್ಕೂರು ತಾಂಡಾ, ನಾಗರಹಳ್ಳಿ ಗ್ರಾಮಗಳ ಸಮೀಪದ ತುಂಗಭದ್ರಾ ನದಿಯಲ್ಲಿ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ ನೀರು ಬರುತ್ತಿದ್ದು, ಆತಂಕ ಮನೆ ಮಾಡಿದಂತಾಗಿದೆ. ದನ-ಕರಿಗಳಿಗೂ ನೀರು ಕುಡಿಸಲು ಯೋಚಿಸಬೇಕಾಗಿದೆ ಎಂದು ನಾಗರಹಳ್ಳಿ ಗ್ರಾಮದ ರೈತ ಮಂಜುನಾಥ ಹಂಚಿನಾಳ ಹೇಳಿದ್ದಾರೆ.ಬುಧವಾರ ತುಂಗಭದ್ರಾ ನದಿ ಪಾತ್ರಕ್ಕೆ ಭೇಟಿ ನೀಡಿ ಹಮ್ಮಿಗಿ,ಸಿಂಗಟಾಲೂರು, ಶೀರನಹಳ್ಳಿ, ಗಂಗಾಪೂರ, ಕೊರ್ಲಹಳ್ಳಿ, ಕಕ್ಕೂರು, ಕಕ್ಕೂರು ತಾಂಡಾ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದ್ದು, ಶೀರನಹಳ್ಳಿಯಿಂದ ಹೆಸರೂರುವರೆಗೆ ಮಾತ್ರ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ನೀರನ್ನು ಲ್ಯಾಬ್ ಗೆ ಕಳಿಸಿ ಪರಿಶೀಲಿಸುವಂತೆ ನೀರಾವರಿ ಇಲಾಖೆಗೆ ತಿಳಿಸಲಾಗಿದೆ. ಲ್ಯಾಬ್ ವರದಿ ಬರುವವರೆಗೂ ಯಾರೂ ನೀರನ್ನು ದನ-ಕರುಗಳಿಗೆ ಕುಡಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಂಡರಗಿ ತಹಸೀಲ್ದಾರ ಹೇಳಿದ್ದಾರೆ.