ತಾಲೂಕಿನ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೆಪ್ಟಂಬರ್ 22 ರ ಸೋಮವಾರದಂದು ನಡೆಯಲಿದೆ. ಆ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಬಹುಮುಖ ಪ್ರತಿಭೆಯಾಗಿರುವ ಸಂಪಿಗೆ ತೋಂಟದಾರ್ಯ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೆಪ್ಟಂಬರ್ 22 ರ ಸೋಮವಾರದಂದು ನಡೆಯಲಿದೆ. ಆ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಬಹುಮುಖ ಪ್ರತಿಭೆಯಾಗಿರುವ ಸಂಪಿಗೆ ತೋಂಟದಾರ್ಯ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ತಿಳಿಸಿದರು. ಸಮ್ಮೇಳನದ ಸಲುವಾಗಿ ನಡೆದ ಪೂರ್ವಭಾವಿ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ 5 ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆದಿದೆ. ಈಗ 6 ನೇ ಸಮ್ಮೇಳನ ಸೆ 22 ರಂದು ನಡೆಸಲು ತೀರ್ಮಾನಿಸಲಾಗಿದೆ. ಒಂದು ದಿನ ನಡೆಯುವ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದ ಸಮಿತಿ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು. ಸಮ್ಮೇಳನವನ್ನು ನಡೆಸಲು ಎಲ್ಲ ಹೋಬಳಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಆಜೀವ ಸದಸ್ಯರು, ಮುಖಂಡರು, ಸಾಹಿತ್ಯಸಕ್ತರ ತೀರ್ಮಾನದಂತೆ ಕಾರ್ಯಕ್ರಮದ ರೂಪುರೇಷೆ ಮಾಡಲಾಗಿದೆ.ಮುಖ್ಯವಾಗಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಸಮ್ಮೇಳನಕ್ಕೆ ಬೇಕಾದ ಎಲ್ಲ ಸಹಕಾರವನ್ನು ನೀಡುವ ಭರವಸೆ ನೀಡಿದ್ದಾರೆ. ಸಮ್ಮೇಳನವನ್ನು ವೈಟಿ ರಸ್ತೆಯಲ್ಲಿನ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಸಮ್ಮೇಳನದ ಉದ್ಘಾಟನೆಯನ್ನು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ನೆರವೇರಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಮಗ ಬಾಬು ಹಿರಣ್ಣಯ್ಯ ಭಾಷಣ ಮಾಡಲಿದ್ದಾರೆ ಎಂದರು.ಸಮ್ಮೇಳನಕ್ಕೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಎಂ.ಟಿ.ಕೃಷ್ಣಪ್ಪ, ಹಣಕಾಸು ಸಮಿತಿ ಕಸಾಪ ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಆಹಾರ ಉಸ್ತುವಾರಿ ಡಾ.ಚೌದ್ರಿ ನಾಗೇಶ್, ಮೆರವಣಿಗೆ ಸಮಿತಿ ಅಮಾನಿಕೆರೆ ಮಂಜಣ್ಣ, ವೇದಿಕೆ ಸಮಿತಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸ್ಮರಣೆ ಸಂಚಿಕೆ ಸಂಪಾದಕರಾಗಿ ನಿವೃತ್ತ ಶಿಕ್ಷಕ ಮಂಜೇಗೌಡ, ಇನ್ನುಳಿದ ಕಸಾಪ ಪದಾಧಿಕಾರಿಗಳು ಪ್ರತಿಯೊಂದು ಸಮಿತಿಗಳಲ್ಲಿ ಸಂಚಾಲಕರಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಡಿ.ಪಿ.ರಾಜು ತಿಳಿಸಿದರು.ಸ್ಮರಣ ಸಂಚಿಕೆಗೆ ತಾಲೂಕಿನ ಯುವ ಸಾಹಿತಿಗಳು, ನಾಗರಿಕರು ವಿಶೇಷ ಎನಿಸುವ ಲೇಖನಗಳನ್ನು ಆಗಸ್ಟ್ 25 ರೊಳಗೆ ಕಳುಹಿಸಿಕೊಡಬೇಕು. ಲೇಖನಗಳ ಆಯ್ಕೆ ಸಂಪಾದಕ ಮಂಡಳಿಯದ್ದಾಗಿರುತ್ತದೆ ಎಂದರು.ಈ ಸಂದರ್ಭದಲ್ಲಿ ಕಸಾಪ ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಕಾರ್ಯದರ್ಶಿ ದಿನೇಶ್, ಮಾಯಸಂದ್ರ ಹೋಬಳಿ ಅಧ್ಯಕ್ಷ ಮುನಿರಾಜು, ಪದಾಧಿಕಾರಿಗಳಾದ ಮಂಜೇಗೌಡ, ಕೆಂಪರಾಜು, ಪರಮೇಶ್ವರ ಸ್ವಾಮಿ, ಷಣ್ಮುಖಪ್ಪ, ಆನಂದಜಲ, ನಂಜೇಗೌಡ, ರಾಘವೇಂದ್ರ, ಬಸವರಾಜು, ಶಿವರಾದ್ಯ, ಗಿರೀಶ್ ಕೆ ಭಟ್, ಲೋಕೇಶ್, ವಿಶ್ವಕರ್ಮ ಗಿರೀಶ್ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.