ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರ ಮಹತ್ವದ ಯೋಜನೆಯಾದ ಬ್ರ್ಯಾಂಡ್ ಬೆಂಗಳೂರು ಯೋಜನೆಯ ಕಾಮಗಾರಿಗಳನ್ನು ಸಂಪೂರ್ಣವಾಗಿ ಬಿಬಿಎಂಪಿಯ ಅನುದಾನದಲ್ಲಿ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.ಪುರಭವನದಲ್ಲಿ 2024-25ನೇ ಸಾಲಿನ ಬಿಬಿಎಂಪಿಯ ಆಯವ್ಯಯ ಮಂಡನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿಯು ತನ್ನ ಆದಾಯದಲ್ಲಿ ₹1,580 ಕೋಟಿಗಳನ್ನು 2024-25ನೇ ಸಾಲಿನ ಆಯವ್ಯಯದಲ್ಲಿ ಮೀಸಲಿಟ್ಟಿದೆ. ಅದಕ್ಕಾಗಿ ಪ್ರತ್ಯೇಕ ಎಸ್ಕ್ರೋ ಖಾತೆ ತೆರೆದು ಆದ್ಯತೆಯ ಮೇರೆಗೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮತ್ತು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಉಳಿದಂತೆ ಬಿಬಿಎಂಪಿಯಲ್ಲಿ ಸದ್ಯ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ₹1,591 ಕೋಟಿ ಮೀಸಲಿಡಲಾಗಿದೆ. ಮೂರು ಸಾವಿರ ಕೋಟಿ ರು. ರಾಜ್ಯ ಸರ್ಕಾರದಿಂದ ಅನುದಾನ ಬರಲಿದೆ. 15ನೇ ಹಣಕಾಸು ಯೋಜನೆಯಡಿ ₹500 ಕೋಟಿ, ಎಸ್‌ಎಫ್‌ಸಿ ಅನುದಾನ ಸೇರಿದಂತೆ ಒಟ್ಟು ₹6,661 ಸಾವಿರ ಕೋಟಿಗಳನ್ನು ಕಾಮಗಾರಿಗಳಿಗೆ ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಪ್ರೀಮಿಯಂ ಎಫ್‌ಎಆರ್ ಹಾಗೂ ಜಾಹೀರಾತು ಮೂಲಕ ಬರುವ ಆದಾಯವನ್ನು ಬಾಕಿ ಬಿಲ್ ಪಾವತಿಗೆ ಬಳಕೆ ಮಾಡುವುದಿಲ್ಲ. ಇನ್ನು ಬ್ರ್ಯಾಂಡ್ ಬೆಂಗಳೂರು ಯೋಜನೆಯ ಕಾಮಗಾರಿಗಳಿಗೆ ಬಳಕೆ ಮಾಡಲಾಗುವುದು. ಸಾರ್ವಜನಿಕರಿಂದ ಸಂಗ್ರಹಿಸುವ ಆಸ್ತಿ ತೆರಿಗೆ ಮೊದಲಾದವುಗಳಿಂದ ಬರುವ ಹಣವನ್ನು ಮಾತ್ರ ಬಾಕಿ ಬಿಲ್ ಪಾವತಿಗೆ ಬಳಕೆ ಮಾಡಲಾಗುವುದು ಎಂದರು.
ಸರ್ಕಾರ ₹3 ಸಾವಿರ ಕೋಟಿ ಮೊತ್ತದ ಬಾಕಿ ಬಿಲ್, ಬಿಬಿಎಂಪಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಯ ಸುಮಾರು ₹5 ಸಾವಿರ ಕೋಟಿ, ಮೊತ್ತದ ಬಾಕಿ ಬಿಲ್ ಪಾವತಿ ಇದೆ. ಬಿಬಿಎಂಪಿ ಈ ವರ್ಷ ಹೆಚ್ಚಿನ ಆದಾಯ ಬಂದರೆ ಬಿಬಿಎಂಪಿಯ ಕಾಮಗಾರಿಯ ಬಾಕಿ ಬಿಲ್ ಪಾವತಿಗೆ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.ಅಕ್ರಮ ಸಕ್ರಮ ಜಾರಿ ಸಾಧ್ಯವಿಲ್ಲಕಳೆದ ವರ್ಷ ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ಪ್ರಮಾಣ ಪತ್ರ ನೀಡುವುದರಿಂದ ಸುಮಾರು ₹1 ಸಾವಿರ ಕೋಟಿ ಆದಾಯ ನಿರೀಕ್ಷೆ ಮಾಡಲಾಗಿತ್ತು. ಪ್ರೀಮಿಯಂ ಎಫ್‌ಎಆರ್ ಜಾರಿಗೊಳಿಸುವುದಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ, 2023-24ನೇ ಸಾಲಿನಲ್ಲಿ ಆಯವ್ಯಯ ₹9 ಸಾವಿರ ಕೋಟಿಗೆ ಪರಿಷ್ಕರಣೆಯಾಗಿದೆ. ಆದರೆ, ಈ ಬಾರಿ ಈಗಾಗಲೇ ಪ್ರೀಮಿಯಂ ಎಫ್‌ಎಆರ್ ಹಾಗೂ ಜಾಹೀರಾತು ನೀತಿ ಜಾರಿಗೆ ಬೇಕಾದ ಸಿದ್ಧತೆ ಮಾಡಲಾಗಿದೆ. ಹೀಗಾಗಿ, 2024-25ನೇ ಸಾಲಿನಲ್ಲಿ ಘೋಷಣೆ ಮಾಡಿದ ಕಾಮಗಾರಿ ಅನುಷ್ಠಾನಕ್ಕೆ ಸಮಸ್ಯೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಾರದಲ್ಲಿ ಜಾಹೀರಾತು ನೀತಿಜಾಹೀರಾತು ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ನಗರದ ಸೌಂದರ್ಯಕ್ಕೆ ಯಾವುದೇ ತೊಂದರೆ ಉಂಟಾಗದ ರೀತಿಯಲ್ಲಿ ಕಣ್ಣೀನ ದೃಷ್ಟಿಗೆ ಮಾಲಿನ್ಯ ಉಂಟಾಗದೇ ರೀತಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಇದರಿಂದ ಬಿಬಿಎಂಪಿಗೂ ಆದಾಯ ಬರಲಿದೆ. ಇನ್ನೊಂದು ವಾರದಲ್ಲಿ ನೀತಿ ಸಿದ್ಧವಾಗಲಿದೆ ಎಂದು ತುಷಾರ್ ತಿಳಿಸಿದರು.
225 ವಾರ್ಡ್‌ಗೆ ₹250 ಕೋಟಿಪ್ರತಿ ವಾರ್ಡ್‌ನ ರಸ್ತೆ ನಿರ್ವಹಣೆ ಮತ್ತು ಗುಂಡಿ ಮುಚ್ಚುವುದಕ್ಕೆ ₹75 ಲಕ್ಷ ಇತರೆ ಅಭಿವೃದ್ಧಿ ₹1.25 ಲಕ್ಷ ಸೇರಿದಂತೆ ಒಟ್ಟಾರೆ 225 ವಾರ್ಡ್‌ಗೆ ₹250 ಕೋಟಿ ಅನುದಾನ ನೀಡಲಾಗಿದೆ. ಕಳೆದ ಬಾರಿಯಂತೆ ಈ ವರ್ಷವೂ ವಿಧಾನಸಭಾ ಕ್ಷೇತ್ರವಾರು ಶಾಸಕರಿಗೆ ಯಾವುದೇ ಅನುದಾನ ನೀಡಿಲ್ಲ ಎಂದು ತುಷಾರ್ ತಿಳಸಿದರು.
ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಹಣಕಾಸು ವಿಭಾಗ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಇದ್ದರು.