ಅವಧಿ ಮೀರಿದ ಔಷಧಿ ಸೇವಿಸಿ ಇಪ್ಪತ್ತು ಕುರಿಗಳು ಸಾವು

KannadaprabhaNewsNetwork | Updated : Jul 09 2024, 12:46 AM IST

ಸಾರಾಂಶ

ಉಯ್ಯಂಬಳ್ಳಿ ಹೋಬಳಿ ಕೇಂದ್ರ ಸ್ಥಾನದ ಪಶು ಚಿಕಿತ್ಸಾಲಯದಲ್ಲಿ ವೈದ್ಯರಿಲ್ಲದೇ ಪಶುಗಳಿಗೆ ಸರಿಯಾದ ಸಮಯಕ್ಕೆ ಔಷಧಿಗಳು ಸಿಗುತ್ತಿಲ್ಲ, ತಾಲೂಕು ವೈದ್ಯಕೀಯ ಸಹಾಯ ನಿರ್ದೇಶಕ ಕುಮಾರ್ ರವರನ್ನು ಭೇಟಿ ಮಾಡಿ ಕೇಳಿದರೆ ರಾಜ್ಯದಲ್ಲಿಯೇ ವೈದ್ಯರ ಕೊರತೆ ಇದೆ ಎಂದು ಹೇಳುತ್ತಾರೆ, ತಾಲೂಕಿನಲ್ಲಿ ಸರಿಯಾಗಿ ನಿರ್ವಹಣೆ ಮಾಡಬೇಕಾದ ಸಹಾಯಕ ನಿರ್ದೇಶಕರ ಬೇಜವಾಬ್ದಾರಿ ಹಾಗೂ ಸಮಯಕ್ಕೆ ಸರಿಯಾಗಿ ಔಷಧಿಗಳು ಸಿಗದ ಕಾರಣ ರೈತರ ಬದುಕು ದುಸ್ತರವಾಗಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಅವಧಿ ಮೀರಿದ ಔಷಧಿಯನ್ನು ಕುರಿಗಳಿಗೆ ನೀಡಿರುವುದರಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಗ್ಗನೂರುದೊಡ್ಡಿ ಗ್ರಾಮದ ಮುತ್ತುರಾಜು ಮನೆಯಲ್ಲಿ ನಡೆದಿದೆ.

ಕನಕಪುರ ತಾಲೂಕು ಉಯ್ಯಂಬಳ್ಳಿ ಸರ್ಕಾರಿ ಪಶು ಚಿಕಿತ್ಸಾಲಯದಲ್ಲಿ ಕುರಿಗಳಿಗೆ ಜಂತುಹುಳು ನಿವಾರಕ ಔಷಧಿಯನ್ನು ಹಾಕುವಂತೆ ವೈದ್ಯರನ್ನು ಭೇಟಿ ಮಾಡಿದಾಗ ಔಷಧಿಯ ಬಾಟಲ್ ಮೇಲೆ ಇದ್ದ ಲೇಬಲ್ ತೆಗೆದು ಅದರ ಜೊತೆ ಒಂದು ಸಿರಿಂಜ್ ಕೊಟ್ಟು, ವೈದ್ಯರ ಕೊರತೆಯಿದೆ ನೀವೇ ಹಾಕಿಕೊಳ್ಳಿ ಎಂದು ಇನ್ಸ್ಪೆಕ್ಟರ್ ವಿನೋದ್ ನೀಡಿದ್ದು, ಕುರಿಗಳಿಗೆ ನೀಡಿದ ಔಷಧಿಯಿಂದ ಏಳು ಕುರಿ ಮರಿಗಳು, ಹದಿಮೂರು ಕುರಿಗಳು ಹಂತ ಹಂತವಾಗಿ ಮೂರು ದಿನಗಳವರೆಗೆ ಸಾವನ್ನಪ್ಪಿವೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಕಣ್ಣು ಕಾಣಿಸದೇ ನಿಂತಿವೆ, ಇನ್ನೂ ಕೆಲವು ನಿತ್ರಾಣಗೊಂಡು ಸಾಯುವ ಹಂತದಲ್ಲಿವೆ ಎಂದು ಆರೋಪಿಸಿದ್ದಾರೆ.

ಉಯ್ಯಂಬಳ್ಳಿ ಹೋಬಳಿ ಕೇಂದ್ರ ಸ್ಥಾನದ ಪಶು ಚಿಕಿತ್ಸಾಲಯದಲ್ಲಿ ವೈದ್ಯರಿಲ್ಲದೇ ಪಶುಗಳಿಗೆ ಸರಿಯಾದ ಸಮಯಕ್ಕೆ ಔಷಧಿಗಳು ಸಿಗುತ್ತಿಲ್ಲ, ತಾಲೂಕು ವೈದ್ಯಕೀಯ ಸಹಾಯ ನಿರ್ದೇಶಕ ಕುಮಾರ್ ರವರನ್ನು ಭೇಟಿ ಮಾಡಿ ಕೇಳಿದರೆ ರಾಜ್ಯದಲ್ಲಿಯೇ ವೈದ್ಯರ ಕೊರತೆ ಇದೆ ಎಂದು ಹೇಳುತ್ತಾರೆ, ತಾಲೂಕಿನಲ್ಲಿ ಸರಿಯಾಗಿ ನಿರ್ವಹಣೆ ಮಾಡಬೇಕಾದ ಸಹಾಯಕ ನಿರ್ದೇಶಕರ ಬೇಜವಾಬ್ದಾರಿ ಹಾಗೂ ಸಮಯಕ್ಕೆ ಸರಿಯಾಗಿ ಔಷಧಿಗಳು ಸಿಗದ ಕಾರಣ ರೈತರ ಬದುಕು ದುಸ್ತರವಾಗಿದೆ ಎಂದು ತಿಳಿಸಿದರು.

ನೂರು ಕುರಿಗಳಲ್ಲಿ ಇಪ್ಪತ್ತು ಕುರಿಗಳು ಈಗಾಗಲೇ ಸತ್ತಿದ್ದು, ಎಪ್ಪತ್ತು ಕುರಿಗಳು ಸಾಯುವ ಹಂತದಲ್ಲಿದ್ದು, ಸುಮಾರು ಐದು ಲಕ್ಷ ರುಪಾಯಿಗಳು ನಷ್ಟವಾಗಿದೆ, ಅವಧಿ ಮುಗಿದ ಔಷಧಿಯನ್ನು ನೀಡಿದ ವೈದ್ಯರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪರಿಹಾರ ಕೊಡಿಸಿಕೊಡುವಂತೆ ಆಗ್ರಹಿಸಿದರು.

Share this article