6 ತಿಂಗಳಿಂದ ರೇಷನ್ ಪಡೆಯದವರ ಕಾರ್ಡ್ ರದ್ದು । ವಾರ್ಷಿಕ ಆದಾಯ ₹1.2 ಲಕ್ಷ ಮೀರಿದ 10,933 ಕುಟುಂಬ ಅನರ್ಹ
ಸರ್ಕಾರದ ಆದೇಶ ಪಾಲನೆ ಮಾಡುತ್ತಿರುವ ಅಧಿಕಾರಿಗಳಿಗೆ ಹೊಸ ರೀತಿ ಸಂಕಟ ಶುರುವಾಗಿದೆ. ಬಿಪಿಎಲ್‌ನಿಂದ ಏಕಾಏಕಿ ಕುಟುಂಬವನ್ನು ಎಪಿಎಲ್ ವ್ಯಾಪ್ತಿಗೆ ತಂದ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಘರ್ಷಣೆ ಉಂಟಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲದ ಸಾರ್ವಜನಿಕರು ತಾಲೂಕು ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಕಚೇರಿಗೆ ದಾಂಗುಡಿ ಇಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವರಿಗೆ ಮಾಹಿತಿ ನೀಡಿ ಮನವೊಲಿಸುವುದು ಅಧಿಕಾರಿಗಳಿಗೆ ನಿತ್ಯದ ಕೆಲಸವಾಗಿದೆ.
ಪಡಿತರಕ್ಕೆ ಪರದಾಟಪಡಿತರ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ ಜಿಲ್ಲೆಯಲ್ಲಿ ಬಗೆಹರಿಯುವಂತೆ ಕಾಣುತ್ತಿಲ್ಲ. ಪಡಿತರ ಅಂಗಡಿಗಳು ಇಲಾಖೆಯ ಸೂಚನೆಗಳನ್ನು ಪಾಲಿಸದೇ ತಿಂಗಳಿಗೆ 2 -3 ದಿನಗಳು ಮಾತ್ರ ಪಡಿತರ ವಿತರಣೆ ಮಾಡುತ್ತಾರೆ. ಈ ದಿನಗಳಲ್ಲಿ ಪಡಿತರ ಪಡೆಯಲು ಕೆಲಸವೆಲ್ಲಾಬಿಟ್ಟು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿಯಿದೆ. ಇನ್ನೊಂದೆಡೆ ಸರ್ವರ್ ಕೂಡ ಆಗಾಗ ಸಮಸ್ಯೆಯಾಗುತ್ತಿದ್ದು, ಕಾಯುವಿಕೆಯನ್ನು ಹೆಚ್ಚಿಸುವಂತೆ ಮಾಡಿದೆ. ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆ ಗಮನಕ್ಕೆ ಬಂದರೂ ಕೂಡ ಯಾವುದೇ ಬದಲಾವಣೆಯಾಗಿಲ್ಲ. ಜನರು ಪ್ರತಿ ತಿಂಗಳು ಪಡಿತರಕ್ಕಾಗಿ ಪರದಾಡುವ ಪರಿಸ್ಥಿತಿ ಮುಂದುವರಿದಿದೆ ಎಂದು ಪಡಿತರದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರದ್ದು ಪಡಿಸುವ ಅಂಶಗಳೇನು?
ಇನ್ನು ಏಕಾಏಕಿ ಬಿಪಿಎಲ್ ಕಾರ್ಡ್ ರದ್ದು ಮಾಡಲು ರಾಜ್ಯ ಸರ್ಕಾರ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಂಡಿದೆ.1.ಯಾವ ಕುಟುಂಬದ ವಾರ್ಷಿಕ ಆದಾಯ 1.2 ಲಕ್ಷಕ್ಕೆ ಮೀರುತ್ತದೆಯೇ ಅಂತಹ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಪಿಎಲ್ ವ್ಯಾಪ್ತಿಗೆ ತರಲಾಗುತ್ತಿದೆ. 2. ಬ್ಯಾಂಕ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳಲ್ಲಿ ಸಾಲ ಸೌಲಭ್ಯ ಪಡೆಯುವ ಸಂಬಂಧ ಬಿಪಿಎಲ್ ಕಾರ್ಡ್ ಹೊಂದಿರುವವರು ತಮ್ಮ ನೈಜ್ಯ ಆದಾಯ ಮೂಲವನ್ನು ತೋರಿಸುತ್ತಾರೆ. ಇಂತಹ ಪ್ರಕರಣಗಳನ್ನೇ ಗುರಿಯಾಗಿಸಿಕೊಂಡು ಆಹಾರ ಇಲಾಖೆ ಅಕಾರಿಗಳು ಅನರ್ಹರನ್ನು ಗುರುತಿಸುತ್ತಿದ್ದಾರೆ. 3.ಇ - ಕೆವೈಸಿ ಆಧಾರದ ಮೇಲೆ ತಂತ್ರಜ್ಞಾನವನ್ನು ಬಳಸಿಕೊಂಡು ಆಧಾರ್ ಲಿಂಕ್ ಆಗಿ ಆದಾಯ ತೆರಿಗೆ ವ್ಯಾಪ್ತಿಗೆ ಬರುವವರನ್ನು ಗುರುತಿಸಿ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ. 4.ಸತತ ಆರು ತಿಂಗಳ ಕಾಲ ಪಡಿತರ ಪಡೆಯದವರು ಹಾಗೂ ಅನುಕೂಲಸ್ಥ ಕುಟುಂಬ ಕಾರು ಸೇರಿದಂತೆ ಇತರೆ ವ್ಯವಸ್ಥೆ ಹೊಂದಿರುವವರನ್ನು ಈ ಪಟ್ಟಿಗೆ ತರಲಾಗುತ್ತಿದೆ. ಆದ್ಯತಾ - ಅಂತ್ಯೋದಯ ಅನ್ನ ಪಡಿತರ ಚೀಟಿಗಳನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ಆಹಾರ ಇಲಾಖೆ ಅಧಿಕಾರಿಗಳು ಅನರ್ಹ ಚೀಟಿಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಸಂಬಂಧ ಸೆ.27ರಂದು ಅಧಿಕಾರಿಗಳ ಸಭೆ ಕರೆದಿದ್ದು, ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಅರ್ಹ ಕುಟುಂಬಗಳು ಆದ್ಯತಾ - ಅಂತ್ಯೋದಯ ಚೀಟಿಯಿಂದ ವಂಚಿತರಾಗದಂತೆ ಗಮನ ಹರಿಸುತ್ತೇವೆ. - ಕೆ.ರಾಜು, ಜಿಲ್ಲಾಧ್ಯಕ್ಷ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ರಾಮನಗರ.
ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ರಾಮನಗರ ಜಿಲ್ಲೆಯಲ್ಲಿ 11 ಸಾವಿರ ಅನರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಗುರುತಿಸಲಾಗಿದೆ. ಅಂತಹ ಕುಟುಂಬವನ್ನು ಎಪಿಎಲ್ ವ್ಯಾಪ್ತಿಗೆ ತರುವ ಕೆಲಸವನ್ನು ಕಳೆದ ಆಗಸ್ಟ್ ತಿಂಗಳಿನಲ್ಲಿ ಚಾಲನೆ ನೀಡಲಾಗಿದೆ. -ರಮ್ಯಾ ಉಪನಿರ್ದೇಶಕಿ ಆಹಾರ, ಗ್ರಾಹಕರ ವ್ಯವಹಾರ ಇಲಾಖೆ ರಾಮನಗರ