ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಚಾಮರಾಜನಗರ ರೈಲು ನಿಲ್ದಾಣವನ್ನು ₹22.31 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ.
ದೇವರಾಜು ಕಪ್ಪಸೋಗೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಚಾಮರಾಜನಗರ ರೈಲು ನಿಲ್ದಾಣವನ್ನು ₹22.31 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ.
ಪ್ರತಿದಿನ ಸರಾಸರಿ 2,634 ಪ್ರಯಾಣಿಕರು ಸಂಚರಿಸುವ ಹಾಗೂ 12 ರೈಲುಗಳು ಕಾರ್ಯಾಚರಣೆ ನಡೆಸುವ ಈ ನಿಲ್ದಾಣಕ್ಕೆ ಹೊಸ ರೂಪ ನೀಡಲಾಗಿದೆ. ನಿಲ್ದಾಣದ ಸೌಂದರ್ಯವರ್ಧನೆ ಜತೆಗೆ ಪ್ರಯಾಣಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಆರಾಮದಾಯಕ ಪ್ರಯಾಣಕ್ಕೆ ಆದ್ಯತೆ ನೀಡಲಾಗಿದೆ.
ಚಾಮರಾಜನಗರ ರೈಲು ನಿಲ್ದಾಣದ ಪುನರಾಭಿವೃದ್ಧಿಯು ಈ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಿದೆ. ಆಧುನಿಕ ತಂತ್ರಜ್ಞಾನ ಅಳವಡಿಕೆಯೊಂದಿಗೆ ಪ್ರಯಾಣಿಕ ಸ್ನೇಹಿ ವಾತಾವರಣ ನಿರ್ಮಿಸಲಾಗಿದೆ.
ಏನೆಲ್ಲ ಸೌಲಭ್ಯಗಳು?:
ನಿಲ್ದಾಣದ ಕಟ್ಟಡದ ಮುಂಭಾಗವನ್ನು ಆಕರ್ಷಕವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ವಿಶಾಲವಾದ ಪ್ರವೇಶ ಪೋರ್ಚ್, ಗ್ರಾನೈಟ್ ನೆಲಹಾಸು ಹಾಗೂ ಆಧುನಿಕ ವಿನ್ಯಾಸ ಅಳವಡಿಸಲಾಗುತ್ತಿದೆ. ಮೂರು ಕೌಂಟರ್ಗಳಿರುವ ಹೊಸ ಟಿಕೆಟ್ ಬುಕಿಂಗ್ ಕಚೇರಿ, ವಿಶಾಲ ಕಾನ್ಕೋರ್ಸ್, ಟಿಸಿ ಕೊಠಡಿ, ಪಾರ್ಸೆಲ್ ಕಚೇರಿ, ಕೆಫೆಟೇರಿಯಾ ಸೇರಿ ಹಲವು ಸೌಲಭ್ಯಗಳು ನಿರ್ಮಾಣಗೊಳ್ಳುತ್ತಿವೆ.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ನಿರೀಕ್ಷಣಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಮಹಿಳೆಯರ ಕೊಠಡಿಯಲ್ಲಿ ಶಿಶುಗಳಿಗೆ ಹಾಲುಣಿಸಲು ಪ್ರತ್ಯೇಕ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಎಲ್ಲ ಪ್ಲಾಟ್ಫಾರ್ಮ್ಗಳಿಗೂ ಮೇಲ್ಛಾವಣಿ:
ನಿಲ್ದಾಣದ ಒಂದರಿಂದ ಮೂರನೇ ಪ್ಲಾಟ್ಫಾರ್ಮ್ವರೆಗೂ ಸಂಪೂರ್ಣ ಉದ್ದಕ್ಕೆ ಮೇಲ್ಛಾವಣಿ ನಿರ್ಮಿಸಲಾಗುತ್ತಿದೆ. ಹಳೆಯ ಪಾದಚಾರಿ ಮೇಲ್ಸೇತುವೆಯನ್ನು ಉಳಿಸಿಕೊಂಡು, 12 ಮೀಟರ್ ಅಗಲದ ಮತ್ತೊಂದು ಹೊಸ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಇದರಲ್ಲಿ ಎಸ್ಕಲೇಟರ್ ಮತ್ತು ಲಿಫ್ಟ್ ಸೌಲಭ್ಯ ಇರಲಿದೆ.
ಪಾರ್ಕಿಂಗ್ ವಿಸ್ತರಣೆ:
ವಾಹನಗಳ ಪಾರ್ಕಿಂಗ್ ಪ್ರದೇಶವನ್ನು 900 ಚದರ ಮೀಟರ್ನಿಂದ 5,730 ಚದರ ಮೀಟರ್ಗೆ ವಿಸ್ತರಿಸಲಾಗುತ್ತಿದೆ. ಮೇಲ್ಛಾವಣಿ ಸಹಿತ ವಾಹನ ನಿಲುಗಡೆ ವ್ಯವಸ್ಥೆ, ಪ್ರತ್ಯೇಕ ಆಟೋ ನಿಲ್ದಾಣ, ಸಂಪರ್ಕ ರಸ್ತೆಗಳ ಅಗಲೀಕರಣ, ಪಾದಚಾರಿ ಮಾರ್ಗ, ಪ್ರಯಾಣಿಕರ ಪಿಕ್ಅಪ್ ಮತ್ತು ಡ್ರಾಪ್ಆಫ್ ವಲಯ ಹಾಗೂ ಹಸಿರು ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ.
ದಿವ್ಯಾಂಗರಿಗೂ ವಿಶೇಷ ಸೌಲಭ್ಯ:
ದಿವ್ಯಾಂಗ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತ್ಯೇಕ ವಾಹನ ನಿಲುಗಡೆ, ಕಡಿಮೆ ಎತ್ತರದ ಟಿಕೆಟ್ ಕೌಂಟರ್, ಕುಡಿಯುವ ನೀರಿನ ವ್ಯವಸ್ಥೆ, ವಿಶೇಷ ಶೌಚಾಲಯ, ದ್ವಿ-ಕೈಗಂಬಗಳಿರುವ ರ್ಯಾಂಪ್ ಹಾಗೂ ದೃಷ್ಟಿಹೀನರಿಗೆ ಅನುಕೂಲವಾಗುವ ಸ್ಪರ್ಶ ಸಂವೇದಿ ಟೈಲ್ಸ್ ಅಳವಡಿಸಲಾಗುತ್ತಿದೆ.
ಡಿಜಿಟಲ್ ತಂತ್ರಜ್ಞಾನಕ್ಕೂ ಆದ್ಯತೆ:
ಪ್ರಯಾಣಿಕರಿಗೆ ರೈಲುಗಳ ಸಂಚಾರದ ಕುರಿತು ನಿಖರ ಮಾಹಿತಿ ನೀಡಲು ಕೋಚ್ ಇಂಡಿಕೇಶನ್ ಬೋರ್ಡ್, ರೈಲು ಸೂಚನಾ ಫಲಕ, ಸಾರ್ವಜನಿಕ ಪ್ರಕಟಣಾ ವ್ಯವಸ್ಥೆ, ಎಲ್ಇಡಿ ನಾಮಫಲಕ ಹಾಗೂ ಆಧುನಿಕ ದೀಪಾಲಂಕಾರ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಹೆಚ್ಚುವರಿ ವೈ-ಫೈ ಪಾಯಿಂಟ್ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನೂ ಸ್ಥಾಪಿಸಲಾಗುತ್ತಿದೆ.
ಕಾಮಗಾರಿಗಳು ಪೂರ್ಣಗೊಂಡ ಬಳಿಕ ಚಾಮರಾಜನಗರ ರೈಲು ನಿಲ್ದಾಣವು ಆಧುನಿಕ ಸೌಲಭ್ಯಗಳನ್ನು ಹೊಂದಿದ ಸುಸಜ್ಜಿತ ನಿಲ್ದಾಣವಾಗಿ ರೂಪುಗೊಳ್ಳಲಿದ್ದು, ಸ್ಥಳೀಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಚಾಮರಾಜನಗರ ಜಿಲ್ಲೆಯ ರೈಲು ಸಂಪರ್ಕ ವ್ಯವಸ್ಥೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಚಾಮರಾಜನಗರ ರೈಲು ನಿಲ್ದಾಣದ ನವೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಅಭಿವೃದ್ಧಿಪಡಿಸಿರುವ ನಿಲ್ದಾಣವನ್ನು ನ.13ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಗಿರೀಶ್ ಧರ್ಮರಾಜ್ ಕಲಗೊಂಡ, ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ ಮೈಸೂರು ವಿಭಾಗ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.