ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಸ್ತುತ ಯುಜಿಸಿ ಎಮೆರಿಟ್ ಫೆಲೋ ಆಗಿರುವ ಡಾ. ರವೀಂದ್ರ ಕೋರಿಶೆಟ್ಟರ್ ಹಾಗೂ ಮೂಲತಃ ವಿಜಯನಗರ ಜಿಲ್ಲೆಯ, ಇಲ್ಲಿಯ ಖ್ಯಾತ ಚಿತ್ರಕಲಾಕಾರ ಬಿ. ಮಾರುತಿ ಅವರಿಗೆ 70ನೇ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
13 ವರ್ಷಗಳ ಹಿಂದೆಯೇ ನಿವೃತ್ತಿಯಾಗಿದ್ದು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಷಯದಲ್ಲಿ ತಮ್ಮ ಕಾರ್ಯ ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇನ್ನು, ಬಿ. ಮಾರುತಿ ವಿಜಯನಗರ ಜಿಲ್ಲೆಯ ಹೊಸಪೇಟೆಯವರು. 1954ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಅವರು, ಕರ್ನಾಟಕ ವಿವಿಯಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಬಾಲ್ಯದಿಂದಲೂ ಹಂಪೆಯ ಪರಿಸರ, ಅಲ್ಲಿನ ಗತವೈಭವ, ಜಾನಪದ ಸೊಗಡಿನ ಸಂಸ್ಕೃತಿಯಿಂದ ಪ್ರಭಾವಿತರಾಗಿ ಬಣ್ಣ ಮತ್ತು ಕುಂಚದೊಂದಿಗೆ ಚಿತ್ರಕಲೆಯನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡರು.ತಮ್ಮ ಕಲಾ ಸಾಧನೆಯ ಮೂಲಕ ಉತ್ತರ ಕರ್ನಾಟಕದಲ್ಲಿ ಬಿ. ಮಾರುತಿ ಪ್ರಮುಖ ಚಿತ್ರಕಲಾವಿದರಲ್ಲಿ ಒಬ್ಬರು. ಇವರ ಕೈಚಳಕದಲ್ಲಿ ಮೂಡಿ ಬಂದಿರುವ ಹಂಪೆಯ ಬಂಡೆಗಳ ಕುರಿತಾದ ಚಿತ್ರಗಳ ಶ್ರೇಣಿ, ಜಾನಪದ ಬದುಕಿನ ಹಳ್ಳಿಯ ಚಿತ್ರಗಳು, ಅಮೂರ್ತ ಚಿತ್ರಗಳು ದೇಶದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗೊಂಡಿವೆ. ಕಳೆದ 45 ವರ್ಷಗಳಿಂದ ಸಾಂಸ್ಕೃತಿಕ ನಗರ ಧಾರವಾಡನ್ನು ಕಲೆ ಭೂಮಿಯನ್ನಾಗಿಸಿದ್ದು, ರಾಜ್ಯದ ಹಲವು ಸಂಘ-ಸಂಸ್ಥೆಗಳ ಪ್ರಶಸ್ತಿ ಮತ್ತು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಚಿತ್ರಕಲೆ ಜೊತೆಗೆ ಶಿಲ್ಪಕಲೆಯತ್ತಲೂ ಇವರ ಚಿತ್ತವಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ, ಸಾಧಕೇರಿಯ ಬಾರೋ ಸಾಧನಕೇರಿ ಉದ್ಯಾನವನ, ಕಾಲೇಜು ರಸ್ತೆ, ಹುಬ್ಬಳ್ಳಿ ಇಂದಿರಾ ಗಾಜಿನ ಮನೆ, ಕೃಷಿ ವಿವಿಗಳಲ್ಲಿ ಇವರು ನಿರ್ಮಿಸಿರುವ ಶಿಲ್ಪಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿವೆ.
ನಾಲ್ಕೂವರೆ ದಶಕಗಳ ಕಾಲ ಮಾಡಿರುವ ಕಲಾ ಸೇವೆಗೆ ಕನ್ನಡ ನಾಡಿನ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಈ ಮೂಲಕ ಕಲಾ ಸೇವೆ ಮತ್ತಷ್ಟು ವಿಸ್ತರಿಸಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಬಿ. ಮಾರುತಿ ಪ್ರತಿಕ್ರಿಯೆ ನೀಡಿದರು.